Hot Posts

6/recent/ticker-posts

ಮತ್ತಿಘಟ್ಟ ಶ್ರೀ ರಾಮಲಿಂಗೇಶ್ವರ ದೇವಾಲಯದಲ್ಲಿ ಸಂಕಲ್ಪಿತ ಯಾಗೋತ್ಸವ

              
ಶಿರಸಿ: ಜನವರಿ 26, 27, 28 ರಂದು ಶ್ರೀ ರಾಮಲಿಂಗೇಶ್ವರ ದೇವಾಲಯ ವಿಶ್ವಸ್ಥ ಸಮಿತಿ, ಮತ್ತಿಘಟ್ಟ (ರಿ.) ಶ್ರೀ ರಾಮಲಿಂಗೇಶ್ವರ ದೇವಾಲಯದಲ್ಲಿ ಸಂಕಲ್ಪಿತ ಯಾಗೋತ್ಸವ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡಿದೆ. ಶ್ರೀ ರಾಮಲಿಂಗೇಶ್ವರ ದೇವಸ್ಥಾನ ನೂರಾ ಐವತ್ತರಿಂದ ಎರಡುನೂರು ವರ್ಷಗಳಷ್ಟು ಹಿಂದಿನ ಕದಂಬ ಶೈಲಿಯ ದೇವಾಲಯ ಪ್ರಾಚೀನವಾಗಿ ಶಿಲಾಮಯ ಗರ್ಭಗುಡಿಯನ್ನು ಹೊಂದಿತ್ತು. ಪರಿವಾರ ದೇವತೆಗಳಾದ ಗಣಪತಿ, ಪಾರ್ವತಿ, ನಂದಿ ಹಾಗೂ ಶಿಖರ ಧ್ವಜಸಹಿತವಾದ ದೇವಸ್ಥಾನ. ಹಿಂದಿನಿಂದಲೂ ಆಗಮೋಕ್ತ ವಿಧಿಯ ಅರ್ಚನೆ ಇತ್ತೆಂಬುದಕ್ಕೆ ಪ್ರಾಕಾರದಲ್ಲಿ ಸುತ್ತಲೂ ಇರುವ ಬಲಿಪೀಠಗಳೇ ಸಾಕ್ಷಿ. ಶಾಂತಪುರ-ಮತ್ತಿಘಟ್ಟ ಭಾಗಿಯ ಸೀಮಾ ದೇವಾಲಯವಾಗಿರುವುದರಿಂದ ಸಮಸ್ತ ಭಕ್ತರು ಸೇವೆ ನೀಡುತ್ತ ಬಂದಿದ್ದಾರೆ.
              

ಪ್ರಸ್ತುತ ಅಡಿಕೆ ಬೆಳೆಗಳಿಗೆ ಎಲೆಚುಕ್ಕೆಯಂತಹ ಮಹಾ ರೋಗಗಳು ಅತಿವೃಷ್ಟಿಯಿಂದ ಅಡಿಕೆ ಕೊಳೆ ರೋಗ, ಕೃಷಿ ಬೆಳೆಗಳಿಗೆ ವನ್ಯ ಪ್ರಾಣಿಗಳಿಂದ ತೀವ್ರವಾದ ಉಪಟಳ, ಮನುಷ್ಯರಿಗೆ ಅನಿರೀಕ್ಷಿತ ರೋಗ ಭಯ, ಸಂಸಾರದಲ್ಲಿ ತೊಡಕು, ಆರ್ಥಿಕ ಸಂಕಷ್ಟಗಳಿಂದ ಜರ್ಜರಿತರಾಗಿ ಎಲ್ಲ ಉಪಕ್ರಮಗಳನ್ನು ಕೈಗೊಂಡರೂ ಸಂಕಷ್ಟದಿಂದ ಪಾರಾಗಲಾಗದೇ ದೇವರ ಮೊರೆ ಹೋಗುವ ಸಂಧರ್ಭದಲ್ಲಿ ಶ್ರೀ ಸ್ವರ್ಣವಲ್ಲೀ ಮಹಾಸ್ವಾಮಿಗಳಿಗೆ ಮೊರೆ ಹೋದಾಗ ಅವರ ಮಾರ್ಗದರ್ಶನದಂತೆ ನಮ್ಮ ಸೀಮೆಯ ಇಷ್ಟ ದೇವರಾದ ಶ್ರೀ ರಾಮಲಿಂಗೇಶ್ವರನ ಸನ್ನಿಧಾನದಲ್ಲಿ ಮೂರು ದಿನಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಂಕಲ್ಪ ಮಾಡಲಾಯಿತು.

             

ಅದರಂತೆ ಮಹಾ ಮಹಿಮೆಯುಳ್ಳ ಈ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಧಾರ್ಮಿಕ ವಿನಿಯೋಗಗಳನ್ನು ನಡೆಸಬೇಕೆಂಬ ಸಂಕಲ್ಪ ಮಾಡಲಾಯಿತು. ಅದಕ್ಕಾಗಿ ಶ್ರೀರಾಮಲಿಂಗೇಶ್ವರ ದೇವಸ್ಥಾನದಲ್ಲಿ ಮೂರು ದಿನಗಳಲ್ಲಿ ಸಹಸ್ರ ಮೋದಕ ಹವನ, ಶತರುದ್ರ ಹವನ, ಪಂಚಾಕ್ಷರೀ ಹವನ ಮತ್ತು ಶತಚಂಡೀ ಯಾಗವನ್ನು ಮಾಡಿ ಶ್ರೀ ದೇವರಲ್ಲಿ ಪ್ರಾರ್ಥಿಸಲು ಯೋಜಿಸಲಾಯಿತು. ಧಾರ್ಮಿಕ ವಿನಿಯೋಗಗಳು ಶ್ರೀ ಸ್ವರ್ಣವಲ್ಲೀ ಮಹಾಸ್ವಾಮಿಗಳ ದಿವ್ಯಸಾನ್ನಿಧ್ಯದಲ್ಲಿ ದೇವಾಲಯದ ಪಾರಂಪರಿಕ ತಂತ್ರಿಗಳಾದ ವೇ॥ ಮೂ॥ ಶಂಕರ ಭಟ್ಟರು, ಕಟ್ಟೆ ಇವರ ಆಚಾರ್ಯತ್ವದಲ್ಲಿ ಅನೇಕ ಋತ್ವಿಜರ ಸಹಭಾಗಿತ್ವದಲ್ಲಿ ನೆರವೇರಲಿದೆ. ಈ ಮೂರೂ ದಿನಗಳ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಕ್ತರು ಪಾಲ್ಗೊಂಡು ಸೇವಾಭಾಗಿಗಳಾಗಿ ಪರಿವಾರ ಸಹಿತನಾದ ಶ್ರೀ ರಾಮಲಿಂಗೇಶ್ವರ ದೇವರ ಹಾಗೂ ಶ್ರೀ ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ವಿನಂತಿಸಲಾಗಿದೆ.

             

ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಜರುಗಲಿವೆ. 

ಕಾರ್ಯಕ್ರಮಗಳ ವಿವರಗಳು

ಕ್ರೋಧಿನಾಮ ಸಂವತ್ಸರ - ಉತ್ತರಾಯಣ - ಮಕರ/ಪುಷ್ಯ ಮಾಸ ಬಹುಳ ದ್ವಾದಶಿ

ರವಿವಾರ, ದಿನಾಂಕ : 26-01-2025 ಮೊದಲನೇ ದಿನ ಬೆಳಿಗ್ಗೆ : ಸಹಸ್ರ ಮೋದಕ ಹವನ.

ಪ್ರಾರ್ಥನೆ : ಸಮಯ ಬೆಳಿಗ್ಗೆ 8-30ಗಂಟೆಗೆ : ದೇವಾಲಯದ ಹಾಗೂ ಗ್ರಾಮದ ಎಲ್ಲಾ ದೇವರನ್ನು

ಕಾರ್ಯಕ್ರಮದ ಯಶಸ್ಸಿಗೆ ಪ್ರಾರ್ಥಿಸಿ ಫಲ ಸಮರ್ಪಿಸುವುದು.

ಶುಬ್ಧಕರ್ಮ : ಪಂಚಗವ್ಯ : ಕಾರ್ಯಕ್ರಮಕ್ಕೆ ಸೇವೆ ಮಾಡಲು ಶರೀರ ಶುದ್ದಿಗೆ ಬೇಕಾದ ಯಜ್ಯೋಪವೀತ ಪಂಚಗವ್ಯ ಸ್ವೀಕಾರ.

ಪುಣ್ಯಾಹ :2 ನಿವಾರಕ ಗಣಪತಿಯನ್ನು, ಜೀವನಕ್ಕೆ ಪ್ರಧಾನವಾದ ಜಲವನ್ನೂ ಪೂಜಿಸಿ ವಿನಿಯೋಗದ ಪುಣ್ಯಸಂಪಾದನೆಗೆ ಬ್ರಾಹ್ಮಣರಿಂದ ಅರ್ಹತೆ ಸಂಪಾದಿಸುವುದು.

ದೇವನಾಂದಿ : ಕುಲದೇವರು ಹಾಗೂ ಪಿತೃದೇವತೆಗಳನ್ನು ಶಾಸ್ರೋಕ್ತವಾಗಿ ಕೌತುಕ ಬಂಧನ : ಈ ಕಾರ್ಯಕ್ರಮಕ್ಕೆ ನಾವೆಲ್ಲರೂ ಸದಾ ಬದ್ದರಾಗುತ್ತೇವೆಂದು ಸಂಕಲ್ಪಿಸಿ ಅರಶಿನ ಕೊಂಬನ್ನು ಕಟ್ಟಿಕೊಳ್ಳುವುದು. ಇದನ್ನು ಕಟ್ಟಿದ ನಂತರ ಬರಬಹುದಾದ ಅಶೌಚಾದಿಗಳು ಬಾಧಿಸುವುದಿಲ್ಲ.

- ಋತ್ವಿಕ್ ವರ್ಣನೆ : ಹೋಮ-ಹವನ ಮಾಡುವಾಗ ಅಧ್ವರ್ಯು, ಬ್ರಹ್ಮ, ಹೋತೃ, ಋತ್ವಿಜ, ದೃಷ್ಟಾರ ಸದಸ್ಯ ಹೀಗೆ ಸ್ಥಾನಗಳಿವೆ. ಆಯಾ ವೈದಿಕರಿಗೆ ಅವರವರ ಸ್ಥಾನವನ್ನು ನೀಡಿ, ವಸ್ತ್ರ, ಗಂಧಾಕ್ಷತೆಗಳಿಂದ ಗೌರವಿಸುವುದು.

ಪ್ರಧಾನ ಸಂಕಲ್ಪ : ಬೆಳಿಗ್ಗೆ 10-00 ಗಂಟೆಗೆ : ನಾವು ಈ ವಿನಿಯೋಗವನ್ನು ಮಾಡಿಸುವ ಉದ್ದೇಶವೇನು ಎಂಬುದನ್ನು ಸವಿಸ್ತಾರವಾಗಿ ಘೋಷಣೆ ಮಾಡಿ ಕಾರ್ಯಕ್ರಮ ಪ್ರಾರಂಭಿಸುವುದು. ಫಲಕ್ಕಾಗಿ ದೇವರಲ್ಲಿ ಮೊರೆಯಿಡುವುದು. ಬೆಳಿಗ್ಗೆ 10-30ರಿಂದ 12-30ರವರೆಗೆ ವೈದಿಕರಿಂದ ಅಥರ್ವಶೀರ್ಷ ಮಂತ್ರದಿಂದ ಸಾವಿರ ಸಂಖ್ಯೆಯಲ್ಲಿ ಗಣಪತಿ ಪ್ರೀತ್ಯರ್ಥ ಸಹಸ್ರ ಮೋದಕ ಹವನ.

ಮೊದಲನೇ ದಿನ ಸಂಜೆ :

ಭೂತ ಶುಲ್ಕ : ಸಂಜೆ 5-00 ಗಂಟೆಯಿಂದ ನಾವು ಮಾಡುವ ಕಾರ್ಯಕ್ರಮದಲ್ಲಿ ಪಂಚಭೂತಗಳಾದ ಭೂಮಿ, ವಾಯು, ಜಲ, ಅಗ್ನಿ, ಆಕಾಶಗಳು ಪ್ರಸನ್ನವಾಗುವಂತೆ ಪ್ರಾರ್ಥಿಸುವುದು ಮತ್ತು ಶುದ್ದಿ ಕರ್ಮಾಂಗ

ರಾಕ್ಷೊಘ್ನ: ನಾವು ಸಂಕಲ್ಪಿಸಿದ ಈ ಕೆಲಸದ ಸಿದ್ಧತೆಗಳಿಗಾಗಿ ಭೂಮಿಯನ್ನು ಅಗೆಯುತ್ತೇವೆ, ಕಲ್ಲುಗಳನ್ನು ಒಡೆಯುತ್ತೇವೆ, ವೃಕ್ಷಗಳನ್ನು ಘಾತಿಸುತ್ತೇವೆ. ಇವಕ್ಕೆಲ್ಲ ಕ್ಷಮೆ ಯಾಚಿಸಿ, ಪ್ರಾಯಶ್ಚಿತ್ತ ಮಾಡಿಕೊಳ್ಳುವುದು.

ವಾಸ್ತು ವಿಧಾನಗಳು : • ಪವಿತ್ರತೆ ಕುರಿತು ವಾಸ್ತೋಷ್ಪತಿಯ ಸಂತುಷ್ಠಿಗಾಗಿ ನೆರವೇರುವ ವಾಸ್ತು ತಂತ್ರಗಳು.*

ರುದ್ರ ಹೋಮಾಂಗ - ಕಲಶ ಸ್ಥಾಪನೆ : ಮಾರನೇ ದಿನದ ರುದ್ರ ಹೋಮಕ್ಕೆ ಸಂಭಂಧಿಸಿದ ಶಿವ ಪರಿವಾರ ದೇವತೆಗಳನ್ನು ಕಲಶದಲ್ಲಿ ಆವಾಹನೆ ಮಾಡಿ, ಸ್ಥಾಪಿಸಿ ಪೂಜಿಸುವುದು.

ರಾಜೋಪಚಾರ : ರಾತ್ರಿ 8-00ಗಂಟೆಗೆ : ಆವಾಹಿಸಿದ ದೇವರನ್ನು ರಾಜನಂತೆ ಗೌರವಿಸಿ, ರಾಜರಿಗೆ ಸಭಾ ದರ್ಬಾರಿನಲ್ಲಿ ನಡೆಯುವ ವೇದ ಪುರಾಣ ಶಾಸ್ತ್ರ, ಸಂಗೀತ, ನೃತ್ಯಾದಿ ಸೇವೆಗಳನ್ನು ಮಾಡುವುದು. ಶ್ರೀದೇವರಲ್ಲಿ ಮಂಗಳಾರತಿ, ತೀರ್ಥಪ್ರಸಾದ ರಾತ್ರಿ 8-30ಗಂಟೆಗೆ. ನಂತರ ಸಾಂಸ್ಕೃತಿಕ ಕಾರ್ಯಕ್ರಮ.

ಕ್ರೋಧಿ ನಾಮ ಸಂವತ್ಸರ ಮಕರ / ಪುಷ್ಯ ಮಾಸ ಬಹುಳ ತ್ರಯೋದಶಿ

ಸೋಮವಾರ, ದಿನಾಂಕ : 27-01-2025 ಬೆಳಿಗ್ಗೆ 7-00ಘಂಟೆಯಿಂದ ಪ್ರಾರಂಭ.

ಶತರುದ್ರ ಪಾರಾಯಣ ಮತ್ತು ಯಾಗ : ರುದ್ರಪಾಠದಲ್ಲಿ ಎರಡು ವಿಭಾಗಗಳು ನಮಕ ಮತ್ತು ಚಮಕ.

ಹನ್ನೊಂದು ನಮಕರುದ್ರ ಪಾಠಕ್ಕೆ ಒಂದು ಚಮಕದ ಪಾಠವಾಗಬೇಕು. ಹೀಗೆ ಶತರುದ್ರವೆಂದರೆ ನೂರಾಇಪ್ಪತ್ತೊಂದು ರುದ್ರಪಾಠವಾಗುತ್ತದೆ. ಇಷ್ಟು ಸಂಖ್ಯೆಯಲ್ಲಿ ಪಾರಾಯಣ ಮಾಡಿ ಹನ್ನೊಂದು ರುದ್ರಪಾಠದಿಂದ ಯಾಗ ಮಾಡುವುದು.

ಶಿವ ಪಂಚಾಕ್ಷರಿ ಜಪ ಮತ್ತು ಹೋಮ : "ನಮಃ ಶಿವಾಯ" ಎನ್ನುವ ಪಂಚಾಕ್ಷರೀ ಮಂತ್ರದಿಂದ ಹವನ.

ಸ್ವರ್ಣವಲ್ಲೀ ಮಹಾಸ್ವಾಮಿಗಳ ಆಗಮನ 11-30ಗಂಟೆಗೆ. ಸ್ವಾಗತ-ಪಾದಪ್ರಕ್ಷಾಲನ-ಶ್ರೀಗಳವರಿಂದ ದೇವತಾ ದರ್ಶನ ಯಾಗ ಶಾಲೆಯಲ್ಲಿ ಶ್ರೀಗಳ ಉಪಸ್ಥಿತಿಯಲ್ಲಿ ರುದ್ರಹವನ ಪೂರ್ಣಾಹುತಿ ಮಧ್ಯಾಹ್ನ 12-00 ಗಂಟೆಗೆ. ಮಧ್ಯಾಹ್ನದ ಪೂಜೆ, ಶ್ರೀಗಳಿಂದ ಸಂಸ್ಥಾನ ದೇವತಾರ್ಚನೆ ಭಿಕ್ಷಾವಂದನೆ, ಸಾರ್ವತ್ರಿಕ ಭೋಜನ ಮಧ್ಯಾಹ್ನ 12-30ಕ್ಕೆ. ಶ್ರೀಗಳಿಗೆ ಪಾದುಕಾಪೂಜೆ,

: ಎರಡನೇ ದಿನ ಸಂಜೆ :

ರಂಗ ಪೂಜೆ : ಸಂಜೆ 5-00ಗಂಟೆಯಿಂದ ಪ್ರಾರಂಭ. ಗರ್ಭಗುಡಿಯಲ್ಲಿ ಇರುವ ಪ್ರಧಾನ ದೇವರ ಜೊತೆಗೆ ಸಮಾನವಾಗಿ ಪರಿವಾರ ದೇವತೆಗಳಿಗೂ ನೈವೇದ್ಯ ಭೋಜನ ನೀಡುವುದು. ಇದರಿಂದ ಬೆಳೆ-ಅನ್ನ ಸಮೃದ್ಧಿಯಾಗುವುದು.

ಚಂಡೀ ಹೋಮಾಂಗ ಕಲಶ ಸ್ಥಾಪನೆ : ಮೂರನೇ ದಿನದ ಚಂಡೀ ಹವನಕ್ಕೆ ಚಂಡೀ ಸಹಿತ ಪರಿವಾರ ದೇವತೆಗಳನ್ನು ಕಲಶದಲ್ಲಿ ಸ್ಥಾಪಿಸಿ, ಪೂಜಿಸುವುದು.

ಕ್ಷೇತ್ರಪಾಲ ಬಲಿ : ಸಂಜೆ 6-00ಗಂಟೆಗೆ ದೇವಾಲಯದ ಸುತ್ತಲೂ ಇರುವ ಬಲಿಕಲ್ಲುಗಳು ಆಯಾ ದೇವರ ಪರಿವಾರ ಅವುಗಳಿಗೆ ಪತ್ರ (ಸೊಪ್ಪು) ನೀರು, ಅಕ್ಷತಗಳಿಂದ ಅರ್ಚಿಸುವ ವಿಧಾನವೇ ಬಲಿ.

ಯೋಗಿನಿ ಬಲಿ : ನಲವತ್ತಾರು ಯೋಗಿನೀ ದೇವತೆಗಳನ್ನು ಆಮಂತ್ರಿಸಿ, ಪೂಜಿಸುವುದು, ಹವಿರ್ಭಾಗ ನೀಡುವುದು.

ಪ್ರಾಕಾರೋತ್ಸವ : ದೇವಾಲಯದ ಹೊರಮೈಲಿನಲ್ಲಿ ಪಲ್ಲಕ್ಕಿಯಲ್ಲಿ ದೇವರನ್ನಿಟ್ಟು ಉತ್ಸವ ಮಾಡುವುದು.

ಪರಿವಾರ ದೇವತೆಗಳಿಗೆಲ್ಲ ಉತ್ಸವ ದರ್ಶನ. ಭಕ್ತರಿಗೂ ಪುಣ್ಯ ಸಂಚಯನ.

ಅಷ್ಟಾವಧಾನ : ಸಂಜೆ 8-00ಗಂಟೆಗೆ : ಚತುರ್ವೇದ, ಪುರಾಣ, ಶಾಸ್ತ್ರ, ಇತ್ಯಾದಿಗಳಿಂದ ದೇವರ ಮುಂದೆ ಉತ್ಸವಾಂಗ ಸೇವೆ ಮಾಡುವುದು. ನಂತರ ಸಾಂಸ್ಕೃತಿಕ ಕಾರ್ಯಕ್ರಮ.

ಕ್ರೋಧಿ ನಾಮ ಸಂವತ್ಸರ ಮಕರ / ಪುಷ್ಯ ಮಾಸ ಬಹುಳ ಚತುರ್ದಶಿ

ಮಂಗಳವಾರ, ದಿನಾಂಕ : 28-01-2025 ಬೆಳಿಗ್ಗೆ

ಚಂಡಿ ಪಾರಾಯಣ : ಬೆಳಿಗ್ಗೆ 7-00 ಗಂಟೆಯಿಂದ ಪ್ರಾರಂಭ.

ಶ್ರೀದೇವರಲ್ಲಿ ತತ್ವ ಕಲಶಾಭಿಷೇಕ : ಬೆಳಿಗ್ಗೆ 9-00 ಗಂಟೆಗೆ.

ಚಂಡೀ ಯಾಗ - ಇಪ್ಪತ್ತಕ್ಕೂ ಹೆಚ್ಚು ವೈದಿಕರಿಂದ ಮೂರುದಿನಗಳಲ್ಲಿ ಶತಚಂಡೀ ಪಾರಾಯಣ, ನೂರರ ಹತ್ತು ಅಂಶಗಳಿಂದ ಪಾಯಸ ದ್ರವ್ಯ ಆಹುತಿ. ಬೆಳಿಗ್ಗೆ 11-30ಗಂಟೆಗೆ ಪೂರ್ಣಾಹುತಿ. ಕುಮಾರಿಯರು ಹಾಗೂ ತವರೂರಿನ ಪ್ರತೀ ಹೆಣ್ಣುಮಕ್ಕಳಿಗೂ ಸುಮಂಗಲ ದ್ರವ್ಯ ಪ್ರಧಾನ. ಮಧ್ಯಾಹ್ನ ಪೂಜೆ ಮಹಾಮಂಗಳಾರತಿ ತೀರ್ಥಪ್ರಸಾದ ವಿತರಣೆ ಸಂತರ್ಪಣೆ ವೈದಿಕ ಮಂತ್ರಾಕ್ಷತೆ. ಮಧ್ಯಾಹ್ನ 12-00 ಗಂಟೆಗೆ. ನಂತರ ಮಧ್ಯಾಹ್ನ 3-00 ಗಂಟೆಗೆ ಧರ್ಮ ಸಭೆ - ಆಚಾರ್ಯರಿಂದ 

ಆಶೀರ್ವಚನ - ಮಂಗಲ ಸಭೆ. ನಂತರ ಸಾಂಸ್ಕೃತಿಕ ಕಾರ್ಯಕ್ರಮ.


ಪ್ರತಿಕ್ರಿಯೆ

Post a Comment

0 Comments