Hot Posts

6/recent/ticker-posts

ಶಿರಸಿಯ ರಾಮಕೃಷ್ಣ ಭಟ್ಟರಿಂದ ಎರಡು ನೂರಕ್ಕೂ ಹೆಚ್ಚು ಭತ್ತದ ತಳಿಗಳ ಸಂರಕ್ಷಣೆ!

ಶಿರಸಿಯ ರಾಮಕೃಷ್ಣ ಭಟ್ಟರಿಂದ ಎರಡು ನೂರಕ್ಕೂ ಹೆಚ್ಚು ಭತ್ತದ ತಳಿಗಳ ಸಂರಕ್ಷಣೆ! 
ರಾಮಕೃಷ್ಣ ಭಟ್ ಶಿರಸಿ ಬಳಿಯ ದೇವತೆಮನೆ ಊರಿನವರು. ಇವರ ಕೃಷಿಯನ್ನು ನೋಡಿದವರು ಮೂಗಿನ ಮೇಲೆ ಬೆರಳಿಡುತ್ತಾರೆ. ಒಂದು ಕೃಷಿ ವಿಶ್ವವಿದ್ಯಾಲಯದ ಕೆಲಸವನ್ನು ರಾಮಕೃಷ್ಣ ಭಟ್ಟರು ಒಬ್ಬರೆ ಮಾಡುತ್ತಿದ್ದಾರೆ. ಎರಡು ನೂರಕ್ಕೂ ಹೆಚ್ಚು ಭತ್ತದ ತಳಿಗಳು ಇವರ ಗದ್ದೆಯಲ್ಲಿ ನೋಡಲು, ಅಧ್ಯಯನಮಾಡಲು ಸಿಗುತ್ತದೆ. ಮತ್ತೆ 65 ತಳಿಗಳ ಹೆಸರು ಅಧ್ಯಯನ ನಡೆಸಬೇಕಿದೆ. 

ಅಡಿಕೆ ಕೃಷಿಕರಾದ ಇವರಿಗೆ ಗದ್ದೆ ಇರುವುದು ಒಂದು ಎಕರೆ ಮಾತ್ರ. ಇರುವ ಒಂದೇ ಎಕರೆಯಲ್ಲಿ ಎಲ್ಲ ಮಾದರಿಯ ತಳಿಯ ಭತ್ತವನ್ನು ಬೆಳೆಸಿದ್ದಾರೆ. ಇದರ ಹಿಂದಿನ ಉದ್ದೇಶ ಭಾರತದ ದೇಶಿಯ ಹಳೆಯ ತಳಿಗಳು, ಹೊಸ ತಳಿಗಳು ಹಾಗೂ ವಿದೇಶಿ ತಳಿಗಳ ಪರಿಚಯ ಜನರಿಗೆ ಮಾಡಿಸುವುದೇ ಆಗಿದೆ. ಇಲ್ಲಿ ಲಾಭದ ಲೆಕ್ಕಾಚಾರ ಇಲ್ಲ. ಯಾವ ತಳಿ ಯಾವ ರೀತಿಯಿಂದ ಅನುಕೂಲ ಅದಕ್ಕೆ ಬರುವ ರೋಗಗಳು ಏನು? ಇದನ್ನು ಹೇಗೆ ಸಂರಕ್ಷಿಸಬಹುದು ಎಲ್ಲಾ ಅಧ್ಯಯನಕ್ಕೆ ಇವರ ಭತ್ತದ ಗದ್ದೆ ಪ್ರಯೋಗಾಲಯ ಆಗಿದೆ. 

ಗಂಧಸಾಲಿ, ಅಮೃತ, ಉಮಾ, ಗೌರಿ, ಪದ್ಮರೇಖ, ಆಲೂರಸಣ್ಣ, ಚಳ್ಳ ಭತ್ತ, ಜಡ್ಡ ಭತ್ತ, ನೀರ ಮುಳಗ, ಮಟ್ಟಳಗ ಬಾಸುಮತಿ, ಗುಲ್ವಾಡಿ, ಸೋನಾಮಸೂರಿ, ಕರಿ ಕಂಟಕ ಅಲ್ಲದೆ ವಿದೇಶಿ ತಳಿಗಳಾದ ಥೈಲ್ಯಾಂಡ್ ಭತ್ತ, ಅಂಬೆ ಮೊಹಲಿ ಹೀಗೆ ಹಲವು ತಳಿಗಳ ಭತ್ತ ಇವರ ಗದ್ದೆಯಲ್ಲಿ ಕಾಣಿಸುತ್ತದೆ. ಪಾರಂಪರಿಕ ತಳಿಗಳ ಸಂರಕ್ಷಣೆ, ಮುಂದಿನ ಜನಾಂಗಕ್ಕೆ ಇವುಗಳ ಅರಿವು ಇರುವಂತೆ ಮಾಡುವುದು ಇವರ ಉದ್ದೇಶ. 
ಇಷ್ಟೊಂದು ಮಾದರಿ ಭತ್ತ ಸಂಗ್ರಹಿಸಲು ಹಲವು ಜಿಲ್ಲೆಗಳಲ್ಲಿ ಇವರು ಸುತ್ತಾಡಿದ್ದಾರೆ. ಭತ್ತಕ್ಕಾಗಿ ಸಿಕ್ಕ ಸಿಕ್ಕ ಊರುಗಳಲ್ಲಿ ಅಲೆದಿದ್ದಾರೆ. ಇವರ ಗದ್ದೆಯಲ್ಲಿ ಪ್ರತಿಯೊಂದು ತಳಿ 2*2 ಅಂತರದಲ್ಲಿ ಪ್ರತ್ಯೇಕವಾಗಿ ಬೆಳೆಸಲ್ಪಟ್ಟಿದೆ. ಒಂದಕ್ಕೊಂದು ಕೂಡಿಕೊಳ್ಳದಂತೆ ಪ್ರತ್ಯೇಕವಾಗಿ ಬೆಳೆಸಿದ್ದಾರೆ. ಗದ್ದೆಯಲ್ಲಿಯೇ ಪ್ರತಿಯೊಂದು ತಳಿಗೆ ಸಂಖ್ಯೆಯನ್ನು ಹಾಕಿದ್ದಾರೆ. ಒಂದರಿಂದ ಎರಡು ನೂರಾ ಅರವತ್ತರವರೆಗೂ ಪ್ರತ್ಯೇಕವಾದ ತಳಿಗಳಿವೆ. ಅವುಗಳ ಬಗ್ಗೆ ವಿವರಗಳನ್ನು ತಮ್ಮ ಡೈರಿಯಲ್ಲಿ ಸಂಖ್ಯೆಗೆ ಅನುಗುಣವಾಗಿ ದಾಖಲಿಸಿದ್ದಾರೆ. ಕೆಂಪು ಅಕ್ಕಿ, ಕಪ್ಪು ಅಕ್ಕಿ, ಔಷಧ ಕ್ಕಾಗಿ ಬಳಸುವ ಅಕ್ಕಿ, ಸುವಾಸನೆಭರಿತ ಅಕ್ಕಿಯ ತಳಿ ಇವರ ಬಳಿ ಇರುವುದು ವಿಶೇಷ

ಇವರ ಈ ಮಾದರಿಯ ಕೃಷಿ ಇವರ ಗದ್ದೆಯನ್ನು ಒಂದು ಮಿನಿ ವಿಶ್ವವಿದ್ಯಾಲಯ ವನ್ನಾಗಿ ಮಾಡಿದೆ. ಮೂರು ಹಂತದಲ್ಲಿ ಬೇಟಿ ಮಾಡಿದಾಗ ಮಾತ್ರ ಒಂದು ಬತ್ತದ ತಳಿಯ ಬಗ್ಗೆ ಸಂಪೂರ್ಣವಾಗಿ ವಿವರವನ್ನು ತಿಳಿಯಬಹುದು ಎನ್ನುತ್ತಾರೆ ರಾಮಕೃಷ್ಣ ಭಟ್. ಇವರ ನಿರಂತರ ಪ್ರಯತ್ನಕ್ಕಾಗಿ ಕರ್ನಾಟಕ ಜೀವವೈವಿಧ್ಯ ಮಂಡಳಿ ಹಾಗೂ 2014ರ ಕೃಷಿ ಮೇಳದಲ್ಲಿ ಗೌರವಿಸಲಾಗಿದೆ. ಭಟ್ಟರ ಸಂಪರ್ಕ ಸಂಖ್ಯೆ 9480562825


ವಿಡಿಯೋ ನೇ ನೋಡಿ

ಗದ್ದೆ ಹೇಗಿದೆ? ಭಟ್ಟರು ಏನಂತಾರೆ? ಕೆಳಗಿರುವ ಲಿಂಕ್ ಒತ್ತಿ ಹಿಡಿದು ಕಾಪಿ ಮಾಡಿ ಗೂಗಲ್ ಸರ್ಚ್ ಮಾಡಿ. YouTube ವಿಡಿಯೋ ವೀಕ್ಷಿಸಿ

https://youtu.be/-D6PDHnqXZg


ಪ್ರತಿಕ್ರಿಯೆ

Post a Comment

0 Comments