Hot Posts

6/recent/ticker-posts

ಬೇಡ್ತಿ-ವರದಾ ನದಿ ತಿರುವು ಯೋಜನೆ ಕುಡಿಯುವ ನೀರಿನ ಯೋಜನೆಯೇ ಅಲ್ಲ: ಅನಂತಮೂರ್ತಿ

ಶಿರಸಿ: ಬೇಡ್ತಿ-ವರದಾ ನದಿ ತಿರುವು ಯೋಜನೆಯನ್ನು ಹಾವೇರಿ ಭಾಗದ ಜನರ ಕುಡಿಯುವ ನೀರಿಗಾಗಿ ಎಂದು ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುವ ಕೆಲಸ ಆಗಿದೆ, ಅಸಲಿಯಾಗಿ ಇದು ಕುಡಿಯುವ ನೀರಿನ ಯೋಜನೆಯೇ ಅಲ್ಲ, ಜೊತೆಗೆ ಸರಕಾರದ ವೆಬ್ಸೈಟ್ ನಲ್ಲಿ ದೊರೆತ ದಾಖಲೆಗಳ ಪ್ರಕಾರ ರಾಯಚೂರು ಜಿಲ್ಲೆಗೆ ನೀರಾವರಿಗೆ ಎಂದು ಈ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ರಾಯಚೂರಿಗೆ ನೀರು ಬೇಕಿದ್ದಲ್ಲಿ ಹಾವೇರಿಯವರು ಹೋರಾಟ ಮಾಡುವುದು ನೋಡಿದರೆ, ಇದರ ಲಾಭ ಬೇರೆ ಏನೋ ಇದ್ದಂತೆ ಕಾಣುತ್ತದೆ ಎಂದು ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಹೇಳಿದರು.

ಅವರು ಬುಧವಾರ ನಗರದ ಮಧುವನ ಹೋಟೆಲ್ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪ್ರಸ್ತುತ ಬೇಡ್ತಿ ವರದಾ ನದಿ ಯೋಜನೆ ಇಂದು ಬಹಳ ಚರ್ಚೆ ಆಗುತ್ತಿರುವ ವಿಷಯ. ಕುಡಿಯುವ ನೀರಿನ ಹೆಸರಿನಲ್ಲಿ ನೀರಾವರಿ ಉದ್ದೇಶಕ್ಕಾಗಿಯೇ ಅನುಷ್ಠಾನ ಮಾಡುವ ಯೋಜನೆಯಾದರೆ ಅದು ಖಂಡಿತ ಅರ್ಥಹೀನ. ನಮ್ಮ ಜಿಲ್ಲೆಯಲ್ಲಿಯೇ ನೀರಾವರಿಗೆ, ಕುಡಿಯುವ ನೀರಿಗೆ ಸಮಸ್ಯೆ ಇದೆ. ಹರ ಮುನಿದರೆ ಗುರು ಕಾಯುವನು ಎಂಬಂತಹ ಮಾತಿದೆ. ಯಾವುದೇ ಸ್ವಾರ್ಥ ಇಲ್ಲದೆಯೇ ಶ್ರೀಗಳು ಈ ಯೋಜನೆಯ ತಡೆಗೆ ನ್ಯಾಯಯುತ ಹೋರಾಟ ಮಾಡುತ್ತಿದ್ದಾರೆ. ಗುರುಗಳ ಮಾತಿಗೆ ಕಟಿ ಬದ್ಧರಾಗಿರುವುದು ಎಲ್ಲರ ಕರ್ತವ್ಯ. ನಮ್ಮ ಜಿಲ್ಲೆಯ ಜನರಿಗಾಗಿ ಈ ನದಿಗಳ ನೀರನ್ನು ಬಳಸುವ ಯೋಜನೆಗಳಿಗೆ ಸರಕಾರ ಪ್ರಸ್ತಾವನೆ ಸಲ್ಲಿಸಬೇಕು. ಈಗಿನ ಯೋಜನೆ ಪ್ರಕಾರ ಭಾರಿ ಅಣೆಕಟ್ಟು ನಿರ್ಮಿಸುವ ಮೂಲಕ ಜನವಸತಿ, ಕೃಷಿ ಪ್ರದೇಶಗಳು ಮುಳುಗಡೆಯಾಗುವುದರಲ್ಲಿ ಸಂಶಯವಿಲ್ಲ. ಇದನ್ನೇ ಪಕ್ಷತೀತವಾಗಿ ನಾವೆಲ್ಲರೂ ಒಗ್ಗೂಡಿ ವಿರೋಧಿಸುತ್ತೇವೆ ಎಂದರು.

ನಿವೃತ್ತ ಪಿ.ಡಬ್ಲ್ಯೂ.ಡಿ ಎಂಜಿನಿಯರ್ ವಿ. ಎಂ. ಭಟ್, ಮಾಜಿ ಜಿ. ಪಂ ಸದಸ್ಯ ಹಾಲಪ್ಪ ಮುಂತಾದವರು ಇದ್ದರು.

ಜಿಲ್ಲೆಯಲ್ಲಿಯೇ ಕುಡಿಯುವ ನೀರು, ಕೃಷಿಗೆ ನೀರಾವರಿ ಸಮಸ್ಯೆ ಇದೆ. ಈ ನಿಟ್ಟಿನಲ್ಲಿ ಇಲ್ಲಿಯ ನದಿಗಳಿಗೆ ಮಿನಿ ಚೆಕ್ ಡ್ಯಾಮ್ ನಿರ್ಮಿಸಿ, ಆ ನೀರನ್ನು ನಮ್ಮ ಜನರಿಗೆ ಉಪಯೋಗುವಂತೆ ಯೋಜನೆ ಸಿದ್ಧಪಡಿಸಿ ಸಣ್ಣನೀರಾವರಿ, ಜಲಸಂಪನ್ಮೂಲ ಇಲಾಖೆಗೆ ಸಲ್ಲಿಸಲಾಗುವುದು. ಸರಕಾರವೂ ಸಹ ಉತ್ತರ ಕನ್ನಡದ ನೀರಾವರಿ ಸಮಸ್ಯೆಗೆ ಅನುದಾನ ನೀಡಬೇಕು. ಇದು ನಮ್ಮೆಲ್ಲರ ಆಗ್ರಹವಾಗಿದೆ. 

- ಅನಂತಮೂರ್ತಿ ಹೆಗಡೆ, ಬಿಜೆಪಿ ಮುಖಂಡ

ಪ್ರತಿಕ್ರಿಯೆ

Post a Comment

0 Comments