Hot Posts

6/recent/ticker-posts

ಅರ್ಧ ಎಕರೆ ಫಲ ಬರುವ ತೋಟ, ಜೊತೆಗೆ ಇನ್ನೂ ಏನೇನು ಮಾಡಬಹುದು? ಯುವಕನ ಈ ಸಾಧನೆ ನೋಡಿ

ಕೃಷಿಯಲ್ಲಿ ಸುರಕ್ಷಿತ ಆದಾಯ ಗಳಿಕೆ ಕಷ್ಟ... ಬೆಳೆ ಕೈಗೆ ಸಿಕ್ಕಾಗಲೇ ಆದಾಯ... ಅಲ್ಲಿಯವರೆಗೂ ಅನಿಶ್ಚಿತತೆ... ಹವಾಮಾನ ವೈಪರೀತ್ಯ, ಅಗತ್ಯವಿಲ್ಲದಿದ್ದಾಗ ಕಾಡುವ ಮಳೆ, ಮಾರುಕಟ್ಟೆಗೆ ನಮ್ಮ ಮಾಲು ಹೋದಾಗಲೇ ಬೆಲೆಯೂ ಕಡಿಮೆ ಇಷ್ಟೆಲ್ಲಾ ಸಮಸ್ಯೆಗಳು ನಮ್ಮ ಕೃಷಿಯಲ್ಲಿ ಎನ್ನುವ ಬಹಳಷ್ಟು ಜನರನ್ನು ನಾವು ನೋಡಿದ್ದೇವೆ. ಇದು ಸತ್ಯ ಕೂಡ. ಆದರೆ ಸವಾಲುಗಳನ್ನು ಮೆಟ್ಟಿ ನಿಲ್ಲುವುದು ಹೇಗೆ? ಇಲ್ಲಿದೆ ನೋಡಿ ಕಾನಸೂರು ಯುವಕನ ಸಕ್ಸಸ್ ಸ್ಟೋರಿ...

ಶಿರಸಿಯಿಂದ 25 ಕಿ.ಮಿ ದೂರದ ಹಕ್ಲಮನೆ ಯುವಕ ಸಂತೋಷ ಎಮ್ ಹೆಗಡೆ ಯುವ ಕೃಷಿಕರಿಗೆ ಮಾದರಿ ಎನಿಸುತ್ತಾರೆ. ಶಿರಸಿಯಿಂದ ಸಿದ್ದಾಪುರ ಸಾಗುವ ರಸ್ತೆಯಲ್ಲಿ ಕಾನಸೂರು ಎಂಬ ಊರಿನಿಂದ 12 ಕಿ.ಮಿ ಒಳಗೆ ಹಕ್ಲಮನೆ ಒಂದರ್ಥದಲ್ಲಿ ವಿರಳ ಜನಸಂಖ್ಯೆ ಇರುವ ಪ್ರದೇಶ. “ಇಲ್ಲಿ ಬರುವವರೇ ಕಡಿಮೆ... ನಾವು, ನಮ್ಮ ಕೃಷಿ ಚಟುವಟಿಕೆಗಳು ಇಷ್ಟೇ ನಮ್ಮ ಪ್ರಪಂಚ” ಎಂದು ಹೇಳುತ್ತ ಸಂತೋಷ ಹೆಗಡೆ ಹಾಗೂ ಅವರ ತಂದೆ ಮತ್ತು ತಾಯಿ ನಮ್ಮನ್ನು ಬರಮಾಡಿಕೊಂಡರು. ಅವರು ಹೇಳಿದ್ದು ಅಕ್ಷರಶಃ ಸತ್ಯ ಎನ್ನುವುದಕ್ಕೆ ಉದಾಹರಣೆ ಎನ್ನುವಂತೆ ಅವರ ಮನೆಯ ಎರಡು ನಾಯಿಗಳು ನಮ್ಮನ್ನು ನೋಡಿ ಬೊಗಳುತ್ತಲೇ ಇದ್ದವು... ನಾವು ವಾಪಸ್ ಬರುವವರೆಗೂ... ಅಂದರೆ ಬರೊಬ್ಬರಿ ಎರಡು ತಾಸು!. ಆದರೆ ಅವರು ವಾಸವಿರುವ ಪ್ರದೇಶ ಸ್ವರ್ಗದ ಅನುಭವ ನೀಡಿದ್ದು ಸುಳ್ಳಲ್ಲ. ನಗರದ ಜಂಜಾಟ, ತಾಪತ್ರಯ, ಗೌಜು, ಗದ್ದಲ ಇವೆಲ್ಲ ಇಲ್ಲಿ ಇಲ್ಲವೇ ಇಲ್ಲ. ಸಂಜೆಯ ಹೊತ್ತಿಗೆ ನಮ್ಮ ಮೈಯನ್ನು ಸೋಕುತ್ತಿದ್ದ ಸೂರ್ಯನ ಕಿರಣಗಳು ನಮಗೆ “ಆಶಾಕಿರಣ” ದಂತೆಯೇ ಅನುಭವಕ್ಕೆ ಬಂದಿತು. ಮನೆಯ ಎದುರು ಸೀತಾಫಲ, ಚಿಕ್ಕೂ, ಸಿಹಿ ಬಕ್ಕೆಹಣ್ಣು ಬಾಳೆ ಮತ್ತು ಅವರ ಕುಟುಂಬದ ಆತ್ಮೀಯತೆ ಎಲ್ಲವನ್ನು ನೋಡಿದರೆ ನಮ್ಮ ಕಷ್ಟಗಳನ್ನು ಆ ಕ್ಷಣಕ್ಕೆ ಮರೆತ ಅನುಭವ.

ಕೇವಲ ಅರ್ಧ ಎಕರೆ ಫಲ ಬರುವ ತೋಟ ಯುವಕನ ಈ ಸಾಧನೆ ನೋಡಿ

ಅರ್ಧ ಎಕರೆ ಫಲ ಬಿಡುವ ತೋಟ ಇದರಿಂದ ಜೀವನ ನಡೆಸುವುದು ಕಷ್ಟ ಎನಿಸಿದಾಗ ಯುವಕ ಸಂತೋಷ ಅವರ ಕೈ ಹಿಡಿದಿದ್ದು ಜೇನು ಕೃಷಿ. ಜೇನು ಪಡೆ ಈಗ ಅವರಿಗೆ ಹಣದ ಹೊಳೆ ಹರಿಸುವತ್ತ ಸಾಗುತ್ತಿದೆ. ಮೊದಲ ವರ್ಷ ಒಂದು ಪೆಟ್ಟಿಗೆ ಇಟ್ಟು ಅಂದಾಜು ಮೂರುವರೆ ಸಾವಿರ ರೂಪಾಯಿ ವೆಚ್ಛದಲ್ಲಿ ಜೇನು ಕೃಷಿ ಆರಂಭಿಸಿದ ಅವರು ಒಂದರಿಂದ ಐದು, ಐದರಿಂದ ಹದಿನಾಲ್ಕು, ಪ್ರಸಕ್ತ ಮೂರನೆ ವರ್ಷ 41 ಪೆಟ್ಟಿಗೆ ಜೇನು ಸ್ಥಾಪಿಸಿದ್ದಾರೆ.
ಈ ಸಲದ ಸಂಪೂರ್ಣ ನಿವ್ವಳ ಲಾಭ ಅಂದಾಜು ಒಂದೂವರೆ ಲಕ್ಷ ರೂಪಾಯಿ ನಿರೀಕ್ಷಿಸುತ್ತಿದ್ದಾರೆ. ಜೊತೆಗೆ ಎರಡು ಎಮ್ಮೆ, ನಾಲ್ಕು ಕುರಿ ಸಾಕುತ್ತಿದ್ದಾರೆ. ಯಾವುದೇ ಸಾಲ, ಸಬ್ಸಿಡಿ ಪಡೆಯದೇ ಸ್ವಂತ ಪರಿಶ್ರಮ ದಿಂದಲೇ ಯುವಕ ಮಾಡಿದ ಸಾಧನೆ ಎಲ್ಲರಿಗೂ ಮಾದರಿ.
ಒಟ್ಟೂ ಎರಡುಮುಕ್ಕಾಲು ಎಕರೆ ತೋಟವಿದೆ ಆದರೆ ಅದರಲ್ಲಿ ಫಲ ಬರುತ್ತಿರುವುದು ಅರ್ಧ ಎಕರೆ ಮಾತ್ರ. ಉಳಿದ ತೋಟಕ್ಕೆ ತಾವೇ ಸ್ವತಃ ಅಡಕೆ ಸಸಿ ಹಚ್ಚಿ ಆರೈಕೆ ಮಾಡುತ್ತಿದ್ದಾರೆ. ಅವರ ಆರೈಕೆಯ ಫಲ ಅಡಕೆ ಸಸಿ ಮೂರು ವರ್ಷಕ್ಕೆ ಸಿಂಗಾರ ಬಂದಿದೆ ಅನ್ನುವಾಗ ಸಂತೋಷ ಅವರ ಮುಖದಲ್ಲಿ “ಸಂತೋಷ” ತುಂಬಿತ್ತು. ವಾರಕ್ಕೆ ನಾಲ್ಕು ಬುಟ್ಟಿ ಕುರಿ ಗೊಬ್ಬರ ಕುರಿ ಸಾಕಣೆಯಿಂದ ಲಭ್ಯವಾಗುತ್ತದೆ, ಜೊತೆಗೆ ಸಗಣಿ ಸ್ಲರಿ ಹಾಗೂ ನೀರಾವರಿ, ಇವೆಲ್ಲದೆರ ಜೊತೆ ಅಪಾರ ಶ್ರಮ ಫಲ ನೀಡತೊಡಗಿದೆ. ಜೇನು ತುಪ್ಪ, ಜೇನು ಪೆಟ್ಟಿಗೆ ಮಾರಾಟ ಆದಾಯ ತಂದಿದೆ. ಪ್ರತಿ ಅಡಕೆ ಮರಕ್ಕೆ ಒಂದು ಬುಟ್ಟಿ ಕುರಿ ಗೊಬ್ಬರ ಹಾಗೂ ಸ್ಲರಿ ನಿಯಮಿತವಾಗಿ ನೀಡುತ್ತ ಬಂದಿದ್ದಾರೆ. ಹವ್ಯಾಸವಾಗಿ ಆರಂಭಿಸಿದ ಕುರಿಸಾಕಣೆ ಯನ್ನು ಇದರ ಉಪಯುಕ್ತತೆಯಿಂದಾಗಿ ದೊಡ್ಡದಾಗಿ ಮಾಡುವ ಆಲೋಚನೆ ಕೂಡ ಇವರಿಗಿದೆ. ಇವರ ಕೃಷಿ ಕುರಿತಂತೆ ಹಂಸ ಯೂಟ್ಯೂಬ್ ಚಾನಲ್ ನಲ್ಲಿ ವೀಡಿಯೋ ಕೂಡ ಪ್ರಸಾರವಾಗಿದೆ. ಈ ಲಿಂಕ್ ಅನ್ನು ಕಾಪಿ ಮಾಡಿ ಗೂಗಲ್ ಸರ್ಚ ಮಾಡಿ ವೀಕ್ಷಿಸಿ 

https://youtu.be/FLGJjJ5Pivg

ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸವಾಲು ಎದುರಿಸಿ ನಿಂತ ಯುವಕ ಸಂತೋಷ ಅವರ ಅನುಭವ ಇತರರಿಗೂ ಸಹಾಯವಾಗಬಲ್ಲುದು. “ಮೊದಲು ಜೇನು ಕೃಷಿ ಆರಂಭಿಸಿದಾಗ ಗೊಂದಲವಿತ್ತು, ಶಿರಸಿ ಓಣಿಕೇರಿಯ ಗುರುಮೂರ್ತಿ ಹೆಗಡೆಯವರನ್ನು ಸಂಪರ್ಕಿಸಿದಾಗ ಅವರು ಉಪಯುಕ್ತ ಸಲಹೆ, ಸಹಕಾರ ನೀಡಿದರು. ಯಾವುದೇ ಕೃಷಿ ಇರಲಿ ಶ್ರದ್ಧೆ ಹಾಗೂ ಶ್ರಮ ಮುಖ್ಯ” ಎನ್ನುತ್ತಾರೆ ಸಂತೋಷ ಹೆಗಡೆ.

ಜೇನು ಕೃಷಿಯ ಬಗ್ಗೆ ಮಾಹಿತಿ ಬೇಕಾದಲ್ಲಿ ಸಂತೋಷ ಹೆಗಡೆಯವರನ್ನು ಮೊಬೈಲ ಸಂಖ್ಯೆ 9731778127 ಮೂಲಕ ಸಂಪರ್ಕಿಸಬಹುದು.

🦢team
ಇದನ್ನೂ ಓದಿ 
ಪ್ರತಿಕ್ರಿಯೆ

Post a Comment

0 Comments