Hot Posts

6/recent/ticker-posts

ನಿರುದ್ಯೋಗ ಎಲ್ಲಿ ಅಂತ ಕೇಳ್ತಾರೆ ಗುರುಮೂರ್ತಿ



ಜೇನು ಕೃಷಿಯಿಂದ ಸಾಧನೆಗೈದ ಯುವಕನ ಮಾದರಿ ಕೃಷಿಯ ಬಗೆಯಿದು. ಸವಿಯಾದ ಜೇನು ಬದುಕಿನಲ್ಲಿಯೂ ಸವಿ ತಂದುಕೊಟ್ಟ ಸಾಹಸ ಗಾಥೆಯಿದು. ಜೇನುಕೃಷಿ ಉತ್ತರಕನ್ನಡ ಭಾಗದಲ್ಲಿ ಜನಪ್ರಿಯತೆ ಪಡೆಯುತ್ತಿದೆ. ಕಡಿಮೆ ಬಂಡವಾಳ ಕಡಿಮೆ ನಿರ್ವಹಣಾ ವೆಚ್ಚ ಇವುಗಳಿಂದ ಜೇನುಕೃಷಿ ಹಲವು ರೈತರನ್ನು ತನ್ನೆಡೆಗೆ ಆಕರ್ಷಿಸುತ್ತದೆ ಜೊತೆಗೆ ನೈಸರ್ಗಿಕ ಜೇನುತುಪ್ಪಕ್ಕೆ ಇರುವ ಉತ್ತಮ ಮಾರುಕಟ್ಟೆ ಕೂಡ ಜೇನು ಕೃಷಿಗೆ ಪೂರಕವಾದ ಅಂಶವಾಗಿದೆ.

ಶಿರಸಿ ಯುವಕನ ಮಾದರಿ ಕೃಷಿ

ಶಿರಸಿ ಬಳಿಯ ಮೇಲಿನ ಓಣಿಕೇರೆಯ ಯುವ ಕೃಷಿಕ ಗುರುಮೂರ್ತಿ ಹೆಗಡೆ ಉಪಕಸುಬಾಗಿ ಜೇನುಪೆಟ್ಟಿಗೆ ಮಾಡುತ್ತಾ ವಾರ್ಷಿಕ ಐದು ಲಕ್ಷಕ್ಕೂ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ. ಶಿರಸಿಯ ಸುತ್ತ ಗ್ರಾಮೀಣ ಭಾಗದಲ್ಲಿ 60ಕ್ಕೂ ಹೆಚ್ಚು ಜೇನುಪೆಟ್ಟಿಗೆ ಸ್ಥಾಪಿಸಿ ನಿರಂತರ ಆದಾಯ ದತ್ತ ಸಾಗುತ್ತಿದ್ದಾರೆ. ನಿರುದ್ಯೋಗ ಎಲ್ಲಿದೆ? ಎಂದು ಪ್ರಶ್ನಿಸುವ ಗುರುಮೂರ್ತಿ ಜೇನುಕೃಷಿ ಮಾಡುವವರಿಗೆ ಅಗತ್ಯ ಸಲಹೆ ನಿರುದ್ಯೋಗ ಸಮಸ್ಯೆ ತೊಡೆದು ಹಾಕುವಲ್ಲಿ ಜೇನುಪೆಟ್ಟಿಗೆಯ ಕೃಷಿ ಬಗ್ಗೆ ತಿಳಿಸುವಲ್ಲಿ ಉತ್ಸುಕರಾಗಿದ್ದಾರೆ. ಕಡಿಮೆ ಬಂಡವಾಳ ಹೆಚ್ಚಿನ ಆಸಕ್ತಿ ಕೃಷಿಗೆ ಬೇಕು ಅನ್ನುತ್ತಾರೆ ಅವರು.

ಪೆಟ್ಟಿಗೆ ಜೇನುಸಾಕಣೆ ಹೇಗೆ?

ಶಿರಸಿಯ ಸುತ್ತ ಕೊರಟಿಬೈಲ್, ಮುಡ್ಗಾರು, ಓಣಿಕೆರೆ, ಹೆಗ್ಗುಂಬಳ ಭಾಗದಲ್ಲಿ ಇಂದು 60ಕ್ಕೂ ಹೆಚ್ಚು ಪೆಟ್ಟಿಗೆ ಸ್ಥಾಪಿಸಿ ಕೃಷಿಯಲ್ಲಿ ತೊಡಗಿದ್ದಾರೆ ಗುರುಮೂರ್ತಿ. ಆದಾಯ ತಂದು ಕೊಡಬೇಕೇ? ಹಂತದಲ್ಲಿ ಕನಿಷ್ಠ ಹತ್ತು ಪೆಟ್ಟಿಗೆಯನ್ನು ಆದರೂ ಸ್ಥಾಪಿಸಬೇಕು. ಆರರಿಂದ ಎಂಟು ಪ್ಲೇಟ್ ಇರುವ ಜೇನು ಪೆಟ್ಟಿಗೆಗೆ ರಾಣಿ ಹುಳ ಸಹಿತವಾಗಿ 1800 ರಿಂದ 2000 ರೂಪಾಯಿ ವರೆಗೆ ದರವಿದೆ. ಒಂದು ವರ್ಷದ ನಿರಂತರ ಕೃಷಿಯಿಂದ ಅದನ್ನು 30 ರಿಂದ 40 ಪೆಟ್ಟಿಗೆ ಯವರೆಗೆ ಹೆಚ್ಚಿಸಬಹುದು. ಇದರಿಂದ ವಾರ್ಷಿಕ ಆದಾಯ ಮೂರು ಲಕ್ಷ ರೂಪಾಯಿ ಗಳಿಸಬಹುದು. ಕೇವಲ ಒಂದು ಪೆಟ್ಟಿಗೆ ಸ್ಥಾಪಿಸಿದರೆ ಅದು ಕೃಷಿ ಅಲ್ಲ ಹವ್ಯಾಸ ಅನಿಸುತ್ತದೆ ಅನ್ನುತ್ತಾರೆ ಗುರುಮೂರ್ತಿ ಹೆಗಡೆ.

ವಾತಾವರಣದ ಸೃಷ್ಟಿ

ಜೇನು ಸಾಕಣೆಯಲ್ಲಿ ಪೆಟ್ಟಿಗೆಯನ್ನು ಸ್ಥಾಪಿಸುವುದರಿಂದ ಮಾತ್ರ ಆದಾಯ ಸಾಧ್ಯವಿಲ್ಲ. ಸುತ್ತಲ ವಾತಾವರಣ ಸೃಷ್ಟಿ ಅಗತ್ಯ. ಹೂವಿನ ಗಿಡ ಬೆಳೆಸುವುದು ಸುತ್ತಲೂ ಇರುವ ಮರಗಿಡಗಳ ಹಾಗೂ ಬೆಳೆಗಳ ಹೂ ಬಿಡುವಿಕೆ, ಕಾಡಿನಲ್ಲಿ ಕಾಡು ಹೂಗಳ ಸಂಖ್ಯೆ, ಇವೆಲ್ಲವೂ ಗಮನಿಸುವ ಅಂಶವಾಗುತ್ತದೆ. ಒಂದು ವೇಳೆ ಜೇನು ಪೆಟ್ಟಿಗೆಯಲ್ಲಿ ಆಹಾರದ ಕೊರತೆ ಉಂಟಾದಲ್ಲಿ ಒಂದು ಪೆಟ್ಟಿಗೆಗೆ ಸುಮಾರು 200 ಎಂ. ಎಲ್ ಸಕ್ಕರೆ ಪಾಕವನ್ನು ಕೊಡಬೇಕು ಆದರೂ ಕೊರತೆ ಕಾಣಿಸಿದರೆ ಒಂದು ವಾರಕ್ಕೆ ಸುಮಾರು ಅರ್ಧ ಲೀಟರಿನಷ್ಟು ಸಕ್ಕರೆಪಾಕ ಅಗತ್ಯ. ತುಡುವೆ ಜೇನು ತಳಿಗಳಾದ ಕೆಂಪು ಜೇನು ಮತ್ತು ಮಲಬಾರಿ ಜೇನು ಇವುಗಳಿಂದ ಉತ್ತಮ ಇಳುವರಿ ಸಾಧ್ಯ. ಪೆಟ್ಟಿಗೆ ಸ್ಥಾಪಿಸುವಾಗ ಕೂಡ ಸುತ್ತಲ ವಾತಾವರಣ ಗಮನಿಸುವುದು ಸೂಕ್ತ. 

ಜಾಗೃತೆ ಮತ್ತು ನಿರ್ವಹಣೆ

ಜೇನು ಕೃಷಿಗೆ ವಾರಕ್ಕೊಮ್ಮೆ ಅದರ ಬಗ್ಗೆ ಲಕ್ಷ್ಯ ವಹಿಸಿದರೆ ಸಾಕು. ಅಂದರೆ ನಿರ್ವಹಣೆ ವೆಚ್ಚ ತುಂಬಾ ಕಡಿಮೆ ಎನ್ನುತ್ತಾರೆ ಗುರುಮೂರ್ತಿ. ಪೆಟ್ಟಿಗೆಗೆ ಇರುವೆ ಬರದಂತೆ ಜಾಗ್ರತೆ ವಹಿಸಬೇಕು . ಇದಕ್ಕಾಗಿ ಪೆಟ್ಟಿಗೆ ಇಡುವ ಸ್ಟ್ಯಾಂಡ್ ಅಥವಾ ಕಂಬದ ಸುತ್ತ ಬಳಸಿದ ಇಂಜಿನ್ ಆಯಿಲ್ ನಲ್ಲಿ ನೆನಸಿದ ಬಟ್ಟೆಯನ್ನು ಸುತ್ತಿ ಡಬೇಕು  ಇದರಿಂದ ಪೆಟ್ಟಿಗೆಗೆ ಇರುವೆ ಬರದಂತೆ ತಡೆಯಬಹುದು. ಈ ರೀತಿ ಜಾಗೃತಿ ವಹಿಸುವುದರಿಂದ ಒಂದು ಪೆಟ್ಟಿಗೆಯಿಂದ ಒಂದು ವರ್ಷಕ್ಕೆ 8ರಿಂದ 10 ಕೆಜಿ ತುಪ್ಪದ ಇಳುವರಿ ಸಾಧ್ಯ. ರೋಗ ತಗುಲುವ ಸಾಧ್ಯತೆಯ ಬಗೆಗೆ ಗಮನ ಬೇಕು.

ಆದಾಯದ ಬಗೆ

ಮೊದಲೇ ಹೇಳಿದಂತೆ 10 ಪೆಟ್ಟಿಗೆಯಿಂದ ಮೊದಲು ಕೃಷಿ ಆರಂಭಿಸಿದಲ್ಲಿ ಅದನ್ನು ವಾರ್ಷಿಕ 30 ರಿಂದ 40 ಪೆಟ್ಟಿಗೆ ವರೆಗೆ ಹೆಚ್ಚಿಸಬಹುದು. ಪೆಟ್ಟಿಗೆಯ ಮಾರಾಟದಿಂದ ಬರುವ ಆದಾಯ ಒಂದು ಕಡೆಯಾದರೆ, ಒಂದು ಪೆಟ್ಟಿಗೆಯಿಂದ ಒಂದು ವರ್ಷಕ್ಕೆ 8ರಿಂದ 10 ಕೆಜಿ ತುಪ್ಪ ತೆಗೆಯಬಹುದು ಶುದ್ಧ ನೈಸರ್ಗಿಕ ಜೇನುತುಪ್ಪ ಇಂದು ಮಾರುಕಟ್ಟೆಯಲ್ಲಿ ರೂಪಾಯಿ ಐದುನೂರಕ್ಕೆ ಮೇಲ್ಪಟ್ಟು ಮಾರಾಟವಾಗುತ್ತಿದೆ. ಹೆಚ್ಚಿನ ಶ್ರಮವಿಲ್ಲದೆ ನಿರಂತರ ಆದಾಯ ಜೇನು ಕೃಷಿಯಿಂದ ಗಳಿಸಬಹುದು. ಅಲ್ಲದೆ ನಮ್ಮ ಮುಖ್ಯ ಕೃಷಿಯಾದ ಅಡಿಕೆ, ತೆಂಗು, ಭತ್ತ ಇವುಗಳ ಬೆಳೆ ವೃದ್ಧಿಯಲ್ಲಿ ಕೂಡ ಜೇನು ಸಹಾಯಮಾಡುತ್ತದೆ. ಅಂದರೆ ಜೇನುಹುಳುಗಳ ಪರಾಗಸ್ಪರ್ಶ ಕ್ರಿಯೆಯಿಂದ ವಾರ್ಷಿಕ ಬೆಳೆಯಲ್ಲಿ ಶೇಕಡ 15ರಿಂದ 20 ಹೆಚ್ಚಳ ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ಮಾರ್ಚ್ ತಿಂಗಳಿನಿಂದ ಮೇ ತಿಂಗಳವರೆಗೆ ಜೇನುತುಪ್ಪದ ಸೀಸನ್ ಎಂದು ಪರಿಗಣಿಸಲಾಗುತ್ತದೆ. ಜೇನುಕೃಷಿಯ ಇನ್ನಷ್ಟು ಮಾಹಿತಿಗೆ 8762958150 ಮತ್ತು 9480774098 ಮೊಬೈಲ್ ನಂಬರಿನ ಮೂಲಕ ಗುರುಮೂರ್ತಿ ಹೆಗಡೆಯವರನ್ನು  ಸಂಪರ್ಕಿಸಬಹುದು. 

ವಿನಾಯಕ ಹೆಗಡೆ ಪತ್ರಕರ್ತರು
ಪ್ರತಿಕ್ರಿಯೆ

Post a Comment

0 Comments