ಅವರು ಯಾಕೆ ಬಿದ್ದರು? ಇವರು ಯಾಕೆ ಗೆದ್ದರು?

ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ ಮಹಾ ಚುನಾವಣೆ -೨೦೨೩ ಮುಗಿದು ಅದರ ಫಲಿತಾಂಶ ಅವರು ಯಾಕೆ ಬಿದ್ದರು? ಇವರು ಯಾಕೆ ಗೆದ್ದರು? ಬಂದಮೇಲೆ ಎಲ್ಲರೂ ಕೇಳುವ ಪ್ರಶ್ನೆಗಳು ಇವು. ಅವರು ಯಾಕೆ ಬಿದ್ದರು? ಇವರು ಯಾಕೆ ಗೆದ್ದರು? ಹಳಿಯಾಳ ಕ್ಷೇತ್ರದಲ್ಲಿ ದೇಶಪಾಂಡೆ ಅವರು ಯಾಕೆ ಗೆದ್ದರು? ಎಂದರೆ ಮೊದಲನೇಯದಾಗಿ ಅವರು ತಮ್ಮ ರಾಜಕೀಯ ಜೀವನದಲ್ಲಿ ಅವರ ಕ್ಷೇತ್ರದ ಸಾಮಾನ್ಯ ಜನರಿಂದ ಯಾವುದೇ ಹಣವನ್ನು ನಿರೀಕ್ಷಿಸದೆ ದಕ್ಷತೆಯಿಂದ ಕೆಲಸ ಮಾಡಿದರು. ದಲ್ಲಾಳಿ ಕೆಲಸವನ್ನು ಮಾಡಲಿಲ್ಲ. ಅಧಿಕಾರಿಗಳನ್ನು ಹಿಡಿತದಲ್ಲಿಟ್ಟುಕೊಂಡು ನೆಲದ ಕಾನೂನನ್ನು ಸರಿಯಾಗಿ ತಿಳಿದು, ಅಧಿಕಾರ ನಡೆಸಿದ್ದರಿಂದ ಅವರ ಜಾತಿ ಪಕ್ಷ ಎಲ್ಲವನ್ನೂ ಮೀರಿ ಜನ ಅವರನ್ನು ಗೌರವಿಸುವಂತ ಪ್ರಭಾವಳಿಯನ್ನು ಅವರು ರೂಪಿಸಿಕೊಂಡರು. ಖರ್ಚು ಮಾಡುವಲ್ಲಿ ತಲೆ ಕೆಡಿಸಿಕೊಳ್ಳದೇ ಖರ್ಚು ಮಾಡಿದರು. ಅದರಿಂದಲೇ ಅವರು ಹತ್ತನೇ ಬಾರಿ ವಿಧಾನಸಭೆಗೆ ನಿಂತು ೯ನೇ ಬಾರಿ ಬಹು ಪ್ರಯಾಸದಿಂದಲಾದರೂ ಘಟಾನುಘಟಿಗಳಾದ ಮರಾಠ ಸಮಾಜದ ತಾವೇ ಬೆಳೆಸಿದ ಶಿಷ್ಯೋತ್ತಮರಾದ ಎಸ್. ಎಲ್. ಘೋಟ್ನೆಕರ್ ಹಾಗೂ ಸ್ವಜಾತಿಯ ಸುನಿಲ್ ಹೆಗಡೆ ಅವರನ್ನು ಸೋಲಿಸಿ ೭೬ನೇ ವಯಸ್ಸಿನಲ್ಲಿ ಪುನಃ ಶಾಸಕರಾದರು. ಉಪ ಮುಖ್ಯ ಮಂತ್ರಿಯಾಗುವ ಕನಸಿನಲ್ಲಿ ಇದ್ದಾರೆ. ಎಸ್. ಎಲ್.ಘೋಟನೇಕರ್ ಹಿಂದುಳಿದ ದಲಿತ ಸಮಾಜದ ವೈರ ಕಟ್ಟಿಕೊಂಡು, ಕೇವಲ ತಮ್ಮ ಮಾರಾಟ ಸಮುದಾಯದ ಮತವನ್ನು ನಂಬಿ ಹಠಮಾರಿಗಳಾಗಿದ್ದರಿಂದ 'ಸಾಹುಕಾರ' ಎಂದು ಜನ ಕರೆದರೂ, ಜನ ಅವರನ್ನು ತಿರಸ್ಕರಿಸಿದ್ದರು. ಇನ್ನು ಸುನಿಲ್ ಹೆಗಡೆ ಅವರಂತೂ ತಮ್ಮ ಕೀರಲು ಧ್ವನಿಯಲ್ಲಿ ಕಿರಿಚುತ್ತಾ ದೇಶಪಾಂಡೆ ಮತ್ತು ಗೋಟ್ನೇಕರರನ್ನು ಹಿಂದುತ್ವದ ಉಗ್ರಗಾಮಿ ಅಜೆಂಡ ಮುಂದಿಟ್ಟುಕೊoಡು ಟೀಕಿಸುತ್ತಾ, ಬಾವುಟ, ಪಾವಟಗೆ ಎತ್ತಂಗಡಿ .....ಮುಂತಾದ ಉಗ್ರಗಾಮಿ ಕಾರ್ಯಾಚರಣೆಗಳ ಮೂಲಕ ತಾವು ಎಲ್ಲ ಸಮುದಾಯದ ಮುಖಂಡ ಎಂಬುದನ್ನು ಮರೆತದ್ದರಿಂದ ಹಾಗೂ ಈ ಬಾರಿ ಗೋವಾದಿಂದಲೂ ಕೊಂಕಣಿ ಮಂತ್ರಿಗಳನ್ನು ಕರೆಸಿ ಹಣದ ಹೊಳೆಯನ್ನು ಹರಿಸಿದರೂ ಅವರಿಗೆ ಗೆಲುವು ಸುಲಭದಲ್ಲಿ ಸಿಗಲಿಲ್ಲ. ಇನ್ನು ಅವರು ಕ್ಷೇತ್ರದಲ್ಲಿ ತಿರುಗಾಡುತ್ತಾ ; ತನಗೆ ತಿನ್ನಲು ಸಿಗದ ನರಿಯಂತೆ 'ಅಧಿಕಾರ' ಎಂಬುದು 'ತುಂಬಾ ಹುಳಿ' ಎಂದು ಹುಳಿಯಿರುವ ದೇಶಪಾಂಡೆಯವರನ್ನು ಇನ್ನೂ ಐದು ವರ್ಷ ಹಳಿಯಲು ತಯಾರಾಗಿದ್ದಾರೆ.!? ದಾಂಡೇಲಿಯ, ಮುಚ್ಚಿದ ಕಾಗದ ಕಾರ್ಖಾನೆಗಳು, ಅಳ್ಳಾವರಕ್ಕೆ ಹೋಗುವ ಕಾಳಿ ನೀರು, ಸ್ಥಗಿತಗೊಂಡ ಪ್ರವಾಸೋದ್ಯಮ..... ಹಳಿಯಾಳದ ಹಿಂದುಳಿಯುವಿಕೆ ಎಲ್ಲವೂ ಮಂತ್ರಿಯಾಗಲಿರುವ ದೇಶಪಾಂಡೆಯವರ ಮರಜಿಯನ್ನು ಕಾಯುತ್ತಾ ಅಭಿವೃದ್ಧಿಯ ಕನಸನ್ನು ಕಾಣುತ್ತಾ ಕುಳಿತುಕೊಳ್ಳಬೇಕಾದ ಸ್ಥಿತಿಯಿದೆ.

ಇನ್ನು ಮಾಜಿ ಸಚಿವ ಶಿವರಾಂ ಹೆಬ್ಬಾರರು ಬಹು ಶ್ರಮಪಟ್ಟು ಈ ಬಾರಿ ಗೆಲ್ಲುವಂತಾಗಿದ್ದು ಎದುರಾಳಿ ಕಾಂಗೈನ ವಿ. ಎಸ್.ಪಾಟೀಲರು ಲಿಂಗಾಯತ ಮತ ಏಕಮುಖವಾಗಿ ಪಡೆದರು. ಹೆಬ್ಬಾರರ ಮೇಲೆ ವಿವಿಧ ಕಾರಣಗಳಿಂದ ಮುನಿಸಿಕೊಂಡ ಸಾಮಾನ್ಯ ಜನತೆಯ ಮತವನ್ನು ಪಡೆದು ಸಮಸ್ಪರ್ಧಿಯಾಗಿ ಹೊರಹೊಮ್ಮಿ ಸೋಲುಂಡಿದ್ದಾರೆ. ಯಲ್ಲಾಪುರ ಪೊಲೀಸ್ ಠಾಣೆಯ ಪಿ.ಎಸ್.ಐ ಯಳ್ಳೂರನ ಕಾಟ, ಮುಂಜಾನೆಯಿoದ ಸಂಜೆಯವರೆಗೂ ಹೆಬ್ಬಾರರ ಮನೆಯಲ್ಲಿ ವಿಜಯ್ ಮಿರಾಸಿ ಎಂಬ ಹಲ್ಲೆ ಕೋರ ಗೆಳೆಯನ ತಾಕಲಾಟ, ಶಿವರಾಮ ಹೆಬ್ಬಾರರು ಉ.ಕ ಉಸ್ತುವಾರಿ ಕೈತಪ್ಪಿಸಿಕೊಂಡು ಹಾವೇರಿ ಜಿಲ್ಲೆಯ ಉಸ್ತುವಾರಿಯಾಗಿ ಮುಖ್ಯಮಂತ್ರಿಗಳನ್ನು ಸ್ಥಳಕ್ಕೆ ಕರೆತಂದರೂ ಭೂಕುಸಿತದಿಂದ ಕಾಣೆಯಾದ ಕಳಚೆ ಗ್ರಾಮಸ್ಥರಿಗೆ ಏನು ಸಿಗದ ಕಾರಣ ಗ್ರಾಮಸ್ಥರಿಗಾದ ನಿರಾಸೆ, ಶಾಸಕರಾಗಿದ್ದಾಗ ಬಹುಪಾಲು ಜನರೊಡನೆ ಬೆರೆಯುತ್ತಿದ್ದ ಹೆಬ್ಬಾರರು ; ಸಚಿವರಾದ ಮೇಲೆ ಜನರೊಡನೆ ಅಂತರ ಕಾಯ್ದುಕೊಳ್ಳುವ ಹಂತ ತಲುಪಿದ್ದರಿಂದ ಜನ ನಿಧಾನವಾಗಿ ಅವರಿಂದ ದೂರಾಗುತ್ತಾ ಹೋದ ಪರಿಣಾಮದಿಂದ ಬಹು ಕಡಿಮೆ ಅಂತರದಿoದ ಅವರು ಗೆಲ್ಲುವಂತಾಯಿತು. ಮುಂಡಗೋಡದಲ್ಲoತೂ ಹಳೇ ಬಿಜೆಪಿಗರು, ಹಣ ಪಡೆದು ಕೆಲವರು, ಅವರಿಗೆ ಕೈಕೊಟ್ಟರು ಮತ್ತು ಬಿಜೆಪಿಯ ಹೆಸರು ಹೇಳಿ ದಾದಾಗಿರಿ ಮಾಡುವವರಿಂದ ಬೇಸತ್ತ ಜನ ಉಲ್ಟಾ ಹೊಡೆದರು. ಅಂತೂ ಯಲ್ಲಾಪುರದ ಜನರೇ ಹೆಬ್ಬಾರರ ಕೈಹಿಡಿದು ಗೆಲ್ಲಿಸಿದ್ದು ಸುಳ್ಳಲ್ಲ. ಇದರಿಂದ ಪ್ರತಿಸ್ಪರ್ಧಿ ವಿ.ಎಸ್. ಪಾಟೀಲ್ ಅವರು ಕಡಿಮೆ ಅಂತರದಿoದ ಸೋಲುವಂತಾಯ್ತು ಎಂಬುದು ಅಲ್ಲಿಯ ಜನರ ಅಭಿಮತ.

ಇನ್ನು ಶಿರಸಿ ಕ್ಷೇತ್ರದಲ್ಲಿ ಬಿಜೆಪಿಯ ಅಗ್ರಮಾನ್ಯ ಶಾಸಕರೂ, ಮಾಜಿ ಸಭಾಪತಿಗಳೂ ಆದ ವಿಶ್ವೇಶ್ವರ ಹೆಗಡೆ ಕಾಗೇರಿಯವರು, ಇತ್ತೀಚಿಗೆ ಅವರ ಅಹಂಕಾರದ ನಡವಳಿಕೆಯಿಂದ ಅವರದೇ ಗುಂಪಿನಲ್ಲಿ ಗೋವಿಂದರಾಗ ತೊಡಗಿದರು. ತಾನು ಗೆದ್ದೇ ಗೆಲ್ಲುವೆನೆಂಬ ಅವರ ಅತಿಯಾದ ಆತ್ಮವಿಶ್ವಾಸ ಅವರಿಗೆ ಕೈ ಕೊಟ್ಟಿತು. ಅವರ ಸೋದರ ಅವರ ಪರವಾಗಿ ಚುನಾವಣೆ ವಿಷಯದಲ್ಲಿ ಅನೇಕರಿಗೆ ಧಮಕಿ ಹಾಕಿದ ರೀತಿಯಲ್ಲಿ ಮಾತನಾಡಿದರೆಂಬ ವದಂತಿ, ಹಾಗೂ ನಾಮಧಾರಿಗಳ ಜಾತಿ ಮತಗಳ ಏಕೀಕರಣ, ಸಿರ್ಸಿ -ಸಿದ್ಧಾಪುರಗಳಲ್ಲಿ ಏಕ ರೀತಿಯಲ್ಲಿ ಆಯಿತಲ್ಲದೆ; ಈಡಿಗ ಪ್ರಣವಾನಂದ ಸ್ವಾಮಿಗಳ ಸತತ ಪ್ರಚಾರ, ಸಾಮಾಜಿಕ ಜಾಲತಾಣಗಳ ಬಳಕೆಯಿಂದಾಗಿ ಕಾಗೇರಿ ಅವರನ್ನು ಅಪರಾಧಿಯಂತೆ ಚಿತ್ರಿಸುವ ವಾತಾವರಣ ಉಂಟಾಯಿತು. ಅನಂತರ ಕಾಂಗ್ರೆಸ್ ತಾಲೂಕಾ ಅಧ್ಯಕ್ಷನಾಗಿ, ಚಿರೆಕಲ್ಲು ಹಾಗೂ ಭೂಮಿ ವ್ಯಾಪಾರ ಮಾಡುವ, ಸಿರ್ಸಿ ಜಿಲ್ಲೆ ಹೋರಾಟಗಾರ ಉಪೇಂದ್ರ ಪೈ, ಕಾಗೇರಿಯವರ ಕೈಬಿಟ್ಟು, ಜೆಡಿಎಸ್ ಪಕ್ಷದಿಂದ ನಿಂತಿದ್ದರಿoದ ಮತ್ತೊಂದಿಷ್ಟು ಮತಗಳು ಹೋದವು. ಸಿರ್ಸಿಯ ಯಾವ ಅಧಿಕಾರಿಗಳ ಮೇಲು ಕಾಗೇರಿ ಅವರಿಗೆ ಹಿಡಿತವಿರಲಿಲ್ಲ. ಸಾಮಾನ್ಯರ ತೊಂದರೆ ತಾಪತ್ರೆಯಗಳನ್ನು ಅವರು ಅರಿಯುವ ಮನಸ್ಥಿತಿಯಲ್ಲಿ ಇರಲಿಲ್ಲಾ. ಭೀಮಣ್ಣನವರ ಏರು ದನಿಯ ಪ್ರಚಾರ ವೈಖರಿ ನೋಡಿ ಸ್ವಲ್ಪ ಕಂಗಾಲದ ಕಾಗೇರಿ ಅವರು, ಈ ಬಾರಿ ಭಯದಿಂದ ಮೊಟ್ಟ ಮೊದಲ ಬಾರಿ ಸ್ವಲ್ಪ ಹಣಹಂಚಿದರು. ಇದು ತನ್ನ ಕೊನೆಯ ಚುನಾವಣೆ ಎಂಬoತೆ ಸಿರ್ಸಿಯಲ್ಲಿ ಮುಖ್ಯಮಂತ್ರಿಗಳನ್ನು ಕರೆಸಿಕೊಂಡು ಸನ್ಮಾನ ಮಾಡಿಸಿಕೊಂಡರು... ಹೀಗೆ ಹತಾಶ ಮನಸ್ಥಿತಿಗೆ ಹೋದರು. ಡಬಲ್ ಹ್ಯಾಟ್ರಿಕ್ ಗೆಲುವಿನ ವೀರರಾಗಿಯೂ ಈ ಬಾರಿ ಅವರು ಸೋತದ್ದು ಮಾತ್ರ ಬಿಜೆಪಿಯ ಪಾಲಿಗೆ, ಮಾಜಿ ಮುಖ್ಯಮಂತ್ರಿಯಾಗಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿ ಸೋತ ಜಗದೀಶ್ ಶೆಟ್ಟರ್ ಅವರ ಸೋಲಿನಷ್ಟೇ ದುಬಾರಿಯಾಗಿದ್ದಂತೂ ನಿಜ.

ಕಾರವಾರ ಕ್ಷೇತ್ರದಲ್ಲಂತೂ ಸತಿಶ ಸೈಲರು ಸಿರಿವಂತರು. ಆರೋಪಿಗಳಾಗಿ ಹಲವು ಕೇಸಿನಲ್ಲಿ ನ್ಯಾಯಾಲಯಕ್ಕೆ ಬೇಕಾದವರು. ಆದರೂ ಮಾಹಿತಿ ಹಕ್ಕಿನ ಹೋರಾಟದ ಮಾಧವ ನಾಯಕರು, ಅವರ ಜೊತೆಗಿರುವ ಮುಂಜಾವು ಪತ್ರಿಕೆ ಎಲ್ಲವೂ, ಅಧಿಕಾರಕ್ಕಾಗಿ ಏನನ್ನು ಮಾಡಲು ಹೇಸದ ಸಮಯ ಸಾಧಕ ಪ್ರವೃತ್ತಿಯ, ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟ ಪಕ್ಷಾಂತರಿ ಆನಂದ ಆಸ್ನೋಟಕರ ಜೊತೆ ಸೇರಿ; ಬಿಜೆಪಿಯ ರೂಪಾಲಿ ನಾಯಕರನ್ನು ಸೋಲಿಸಲೇಬೇಕೆಂದು ಪಣತೊಟ್ಟು ಕೆಲಸ ಮಾಡಿದ್ದರು. ಕೊನೆಯಲ್ಲಿ ರೂಪಾಲಿ ನಾಯಕರು ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದರೂ ಏಕಾಂಗಿಯಾಗಿ ಅವರೆಲ್ಲರನ್ನು ಎದುರಿಸಿ ಸಮಸಮ ಹೋರಾಟ ಮಾಡಿ ಅಲ್ಪ ಅಂತರದಿoದ ಸೋತರು. ರೂಪಾಲಿ ನಾಯಕರು ಸತ್ಯವನ್ನು ಸಾರ್ವಜನಿಕರೆದುರು ತೆರೆದಿಟ್ಟರಲ್ಲದೇ, ಬಹಿರಂಗವಾಗಿ ಮಾನಗೆಟ್ಟವರು ಎಂದು ತಾವು ತಿಳಿದವರ ಮೇಲೆ ಬಿಂದಾಸಾಗಿ ಮಾನ ಹಾನಿ ಕೇಸುಗಳನ್ನು ಹಾಕಿ, ದಬ್ಬಾಳಿಕೆ ಮಾಡುವ 'ಕಾಮಾ ಪೂರ್ತಿ ಮಾಮಾ'ಗಳನ್ನು ಕಂಡ ಕಂಡಲ್ಲಿ ಖಂಡಿಸಿದರು. ಅವರ ಆಪ್ತ ಸಹಾಯಕರ ಗುಪ್ತ ನಡೆಯು, ಸಂಪತ್ತಿನ ಸಂಚಯನವೂ ಅದರಿಂದ ಆದ ಗಲಾಟೆ - ಗುಲ್ಲುಗಳು ಅವರ ಸೋಲಿಗೆ ಕಾರಣವಾದವು. ಸತೀಶ್ ಸೈಲರು ಜನರು ತಿಳಿದುಕೊಂಡಷ್ಟು ಸುಭಗರಲ್ಲದಿದ್ದರೂ ಮತ್ತೆ ಅವರು ಮತ್ತೂ ಹೆಚ್ಚು ದೊಡ್ಡ ಕೋಟ್ಯಾಧೀಶರರಾಗಲು ಎಂಬoತೆ ಗೆದ್ದು ಬಂದರು!

ಕುಮಟಾ ಕ್ಷೇತ್ರದಲ್ಲಿ ಬಿಜೆಪಿಯ ದಿನಕರ ಶೆಟ್ಟರು ಮತ್ತು ಜೆ.ಡಿ.ಎಸ್.ನ ಸೂರಜ್ ಸೋನಿ ಅವರ ನಡುವೆ ಜಿದ್ದಾಜಿದ್ದಿನ ಹೋರಾಟ ಮತ ಪೆಟ್ಟಿಗೆಯಲ್ಲಿ ನಡೆದು ಕೆಲವೇ ಮತಗಳಿಂದ ದಿನಕರ ಶೆಟ್ಟರು ಗೆದ್ದು ಬಂದರೆ, ಸೂರಜ್ ಸೋನಿ ಅವರು ಕೇವಲ ಹೋರಾಟ, ಪಾದಯಾತ್ರೆ ಸತತ ಜನ ಸಂಪರ್ಕಗಳಿoದ ತಮ್ಮ ಜಾತಿಯ ಮಿತಿಯನ್ನು ಮೀರಿ, ಜನರ ಮತವನ್ನು ಪಡೆದು ಸೋತು ಗೆದ್ದರು! ದಿನಕರ್ ಶೆಟ್ಟರ ಆಸ್ತಿ ಹೆಚ್ಚಳ, ಹೊನ್ನಾವರಕ್ಕೆ ಅವರು ಮಾಡಿದ ತಾರತಮ್ಯ, ಕುಮಟಾ ನಗರದಲ್ಲಿ ರಸ್ತೆ ವಿಸ್ತರಣೆಯಿಂದ ಕೊಂಕಣಿಗರ ಕೆಂಗಣ್ಣಿಗೆ ಗುರಿಯಾದದ್ದು, ಈ ಎಲ್ಲ ಕಾರಣದಿಂದ ಅವರು ಸೋಲುತ್ತಾರೆ ಎಂದು ಅನೇಕ ಜನ ಭಾವಿಸಿದ್ದರು. ಕೊನೆ ಗಳಿಗೆಯಲ್ಲಿ ಕಾಂಗೈನಿAದ ಬಿಜೆಪಿ ನೆರವಿಗೆ ಬಂದ ಕಡತೋಕಾ ಶಿವಾನಂದ ಹೆಗಡೆಯವರ ಬಳಗದ ನಾಮಧಾರೀ ಗ್ರಾ.ಪಂ. ಸದಸ್ಯರು ಅವರ ನೆರವಿಗೆ ಬಂದರು. ರಾತ್ರೋರಾತ್ರಿ ನಡೆದ ಗುಪ್ತ ಕಾರ್ಯಾಚರಣೆಯ ತಿರುಮಂತ್ರದಿoದ ಅವರು ಮರು ಏಣಿಕೆಯಲ್ಲಿ ಗೆಲ್ಲುವಂತಾಯಿತು.

ಇನ್ನು ಭಟ್ಕಳದಲ್ಲಿ ಕಳೆದೆರಡು ವರ್ಷಗಳಿಂದ ಕಾಂಗ್ರೆಸ್ ಅಭ್ಯರ್ಥಿ ಮಂಕಾಳು ವೈದ್ಯರು ಅಧಿಕಾರದಲ್ಲಿ ಇದ್ದದ್ದಕ್ಕಿಂತ ಹೆಚ್ಚು, ಆ ಕ್ಷೇತ್ರದಲ್ಲಿ ತಮ್ಮ ದಾನ ಧರ್ಮ ನೆರವು ಶುಭ ಕಾರ್ಯಗಳಿಂದ ಜನರ ಮನ ಗೆಲ್ಲುತ್ತ , ಈ ಬಾರಿ ಅವರು ಗೆದ್ದೇ ಗೆಲ್ಲುತ್ತಾರೆ ಎಂಬ ಮಾತು ಸಾಮಾನ್ಯರ ಬಾಯಲ್ಲಿ ಬರುವಂತೆ ನಡೆದುಕೊಂಡರು.ಯಾರೊಡನೆಯೂ ಅಂತರ ಕಾಯ್ದು ಕೊಳ್ಳದೇ, ಜಾತಿ ಭೇದ ಎಣಿಸದೇ, ಹರಿವ ನೀರಂತೆ ಎಲ್ಲರ ಜೊತೆ ಬೆರೆತು ಎಲ್ಲರ ಕಷ್ಟ ಸುಖ ಅರಿತು, ಸ್ಪಂದಿಸಿ ಹಲವರ ನಿರೀಕ್ಷೆಯಂತೆ ವೈದ್ಯರು, ೩೦ಕ್ಕೂ ಹೆಚ್ಚು ಸಾವಿರ ಮತಗಳ ಅಂತರದಿoದ ಸುನಿಲ್ ನಾಯ್ಕರನ್ನು ಸೋಲಿಸಿ ಶಾಸಕರಾದರು. ಸುನಿಲ್ ನಾಯ್ಕರು ವಿನಯವಂತರಾಗಿರಾಗಿದ್ದರೂ, ಅವರ ಗುಂಪುಗಾರಿಕೆಯ ಜೀವನ ಶೈಲಿ, ಸ್ವಜನ ಪಕ್ಷಪಾತಗಳು ಬಹಳ ಜನರಿಗೆ ಸೇರಲಿಲ್ಲ. ಹಿಂದಿನ ಬಾರಿ ಅವರಿಗೆ ಟಿಕೆಟ್ ಕೊಡಿಸಿ ಪ್ರಚಾರಕ್ಕೆ ಬಂದ ಅವರ ಗುರು ಸಂಸದ ಅನಂತ್ ಕುಮಾರ್ ಹೆಗಡೆಯವರು ಈ ಬಾರಿ ಪ್ರಧಾನಿ ಮೋದಿ ಅವರು ಉತ್ತರ ಕನ್ನಡ ಜಿಲ್ಲೆಗೆ ಬಂದರೂ, ಅವರು ಎಲ್ಲೂ ಚುನಾವಣಾ ಪ್ರಚಾರಕ್ಕೆ ಬರದೇ ಇರುವುದರಿಂದ, 'ಕಾದು ನೋಡುವ ತಂತ್ರ' ಅನುಸರಿಸಿದ್ದರಿಂದ ಈ ಬಾರಿ ನಾಲ್ಕು ಕ್ಷೇತ್ರದಲ್ಲಿ ಕಾಂಗ್ರೆಸ್ಸು, ಕೇವಲ ಎರಡು ಕ್ಷೇತ್ರದಲ್ಲಿ ಬಿಜೆಪಿ ಬರುವಂತಾಯಿತು. ಜೆಡಿಎಸ್ ಅಭ್ಯರ್ಥಿ ನಾಗೇಂದ್ರ ನಾಯ್ಕರು ಪ್ರಚಾರ ವಿಮುಖರಾಗಿ ಕಡಿಮೆ ಮತ ಪಡೆದಿದ್ದರಿಂದ, ಸುನಿಲ್ ಬಹು ಅಂತರದಿAದ ಸೋಲುವಂತಾಯ್ತು. ಹಣ ಖರ್ಚು ಮಾಡಿಯೂ ಸೋತ ಬಿಜೆಪಿಗರು ಆತ್ಮವಲೋಕನೆ ಮಾಡಿಕೊಳ್ಳಲು ಇದು ಸಕಾಲವಾಗಿದೆ.

ಫಲಿತಾಂಶ ಮುಗಿಯುತ್ತಿದ್ದಂತೆ ಬಣ್ಣ ಬಣ್ಣದ ಧ್ವಜಗಳ ಹಾರಾಟ, ಚೀರಾಟಗಳು...... ವಾಟ್ಸಪ್ ಯುದ್ಧ ಭೂಮಿಯಲ್ಲಿ ಮತ್ತೆ ಆರಂಭವಾಗಿದ್ದು ಪುಕ್ಕಟೆ ಸೌಲತ್ತುಗಳ ಜೊತೆ ಜನಜೀವನಕ್ಕೆ ದುಬಾರಿಯಾದ ದೊಂಬಿ, ಮೆರವಣಿಗೆಗಳು ಹೊಡೆದಾಟ, ಗೋಲಿಬಾರ್‌ಗಳು ಸಂಭವಿಸುವ ಲಕ್ಷಣಗಳು ರಾಜಕೀಯ ಕುರ್ಚಿ ಕಚ್ಚಾಟದ ನಡುವೆ ಹಳ್ಳಿಯಿಂದ ದಿಲ್ಲಿವರೆಗೆ ಗೋಚರಿಸುತ್ತಿವೆ.ಅಭಿವೃದ್ಧಿ ಕೆಲಸಗಳು ಮಾತ್ರ ಯಾರೂ ಕೈಗೂ ಸಿಗದೆ ನಾಪತ್ತೆ ಆಗಿರುವುದಂತೂ ನಿಜ!


ಕೃಷ್ಣಮೂರ್ತಿ ಹೆಬ್ಬಾರ್ 

ಪ್ರಧಾನ ಸಂಪಾದಕರು "ನಾಗರಿಕ" 

(ನಾಗರಿಕ ಪತ್ರಿಕೆಯ ಲೇಖನ)

Post a Comment

0 Comments