Hot Posts

6/recent/ticker-posts

ಗೊಬ್ಬರ ಗುಂಡಿ ಇಲ್ಲದೆಯೂ ಕೃಷಿ ಸಾಧ್ಯ!!!

ಗೊಬ್ಬರ ಗುಂಡಿ ಇಲ್ಲ, ಹಣಕೊಟ್ಟು ತರುವುದು ಇಲ್ಲ, ಆದರೆ ಕೃಷಿ ಕೆಲಸ ಮಾತ್ರ ನಿರಾಯಾಸ ಇದು ಹೇಗೆ ಸಾಧ್ಯ??? ಗೊಬ್ಬರ ಗುಂಡಿಯನ್ನು ಸ್ಥಾಪಿಸಿ, ಸೊಪ್ಪು, ಸಗಣಿ, ಸ್ಲರಿ ಹಾಯಿಸಿ ಗೊಬ್ಬರ ಉತ್ಪಾದಿತವಾದ ಮೇಲೆ ಅಡಿಕೆ ತೋಟಕ್ಕೆ ಕೂಲಿಯಾಳುಗಳಿಂದ ಹಾಕಿಸಿ ಕೃಷಿ ಕಾರ್ಯ ನಡೆಯುವುದನ್ನು ನಾವು ನೋಡಿದ್ದೇವೆ. ಇಷ್ಟೆಲ್ಲಾ ಹಂತಗಳನ್ನು ದಾಟದೆಯೂ ಅಡಿಕೆ ಮರಗಳಿಗೆ ಗೊಬ್ಬರವನ್ನು ಹಾಕಬಹುದು. ಅಂದರೆ ಹಂತಗಳನ್ನು ಕಡಿಮೆ ಮಾಡಲು ಸಾಧ್ಯ. ಬಹಳಷ್ಟು ಜನರು ಈ ಪದ್ಧತಿಯನ್ನು ಈಗಾಗಲೇ ಅನುಸರಿಸುತ್ತಿರಬಹುದು ಆದರೆ ವ್ಯವಸ್ಥಿತವಾಗಿ ಮಾಡಿದರೆ ಹೇಗೆ ಲಾಭ ಇದನ್ನು ತಿಳಿದುಕೊಳ್ಳುವುದು ಮುಖ್ಯ. 


ಶಿರಸಿ ಬಳಿಯ ಕಾನಳ್ಳಿ ಊರಿನ ಯುವ ಕೃಷಿಕ ಸೀತಾರಾಮ ಹೆಗಡೆ ಕಳೆದ ಮೂರು ವರ್ಷಗಳಿಂದ ಇದೇ ಪದ್ಧತಿಯನ್ನು ಅನುಸರಿಸುತ್ತ ಬಂದಿದ್ದಾರೆ. ಈ ಪದ್ಧತಿ ಏನು ಅಂತೀರಾ? 'ಬಯೋ ಡೈಜೆಸ್ಟರ್' ಇದು ಇವರ ತಂತ್ರ. 6 ಫೂಟ್ ಅಗಲ 8 ಫೂಟ್ ವ್ಯಾಸದಲ್ಲಿ ಕೊಟ್ಟಿಗೆಯ ಬಳಿ ಎರಡು ಗುಂಡಿಗಳನ್ನು ತೋಡಿದ್ದಾರೆ. ಮೊದಲನೆಯ ಗುಂಡಿಯಲ್ಲಿ ಸೊಪ್ಪು, ಹುಲ್ಲು, ಹಾಕಲಾಗಿರುತ್ತದೆ, ಈ ಗುಂಡಿಗೆ ಕೊಟ್ಟಿಗೆಯಿಂದ ಕೊಟ್ಟಿಗೆಯನ್ನು ತೊಳೆದ ನೀರು, ಗೋಮೂತ್ರ, ಮನೆಯ ಬಚ್ಚಲಿನ ಸ್ನಾನದ ನೀರು ಪೈಪ್ ಮುಖಾಂತರ ತಲುಪುವಂತೆ ಮಾಡಿದ್ದಾರೆ. ಈ ನೀರಿನ ಮೂಲಕ ಡೈಜೆಸ್ಟ್ ಆದ ಗೊಬ್ಬರ ದ್ರವರೂಪದಲ್ಲಿ ಎರಡನೆಯ ಗುಂಡಿಯಲ್ಲಿ ಶೇಖರವಾಗುತ್ತದೆ. ಹೀಗೆ ಶೇಖರವಾಗುವಾಗ ಇದು ಪಿವಿಸಿ ಪೈಪ್, ಅದಕ್ಕಳವಡಿಸಿದ ಸ್ಟೀಲ್ ಮೆಶ್ ಮೂಲಕ ಫಿಲ್ಟರ್ ಆಗಿರುತ್ತದೆ. ದ್ರವರೂಪದ ಗೊಬ್ಬರವನ್ನು ಪಂಪ್ ಮೂಲಕ ತೋಟದ ಅಡಿಕೆ ಮರಗಳಿಗೆ ಪೈಪ್ ಮೂಲಕ ನೇರವಾಗಿ ಹಾಯಿಸುತ್ತಾರೆ. 

                      ಲಾಭ ಹೇಗೆ?
ಕೃಷಿಯಲ್ಲಿ ಲಾಭದ ಲೆಕ್ಕಾಚಾರ ಹಾಕುವಾಗ ಈ ಪದ್ಧತಿಯನ್ನು ಅನುಸರಿಸಿದಾಗ ಖಂಡಿತಾ ನಿಮಗೆ ಲಾಭ ಇದೆ ಎನ್ನುತ್ತಾರೆ ಸೀತಾರಾಮ ಕಾನಳ್ಳಿ. ಮೊದಲನೆಯದಾಗಿ ಗೊಬ್ಬರ ಗುಂಡಿ ಸ್ಥಾಪಿಸುವ ಅವಶ್ಯಕತೆ ಇಲ್ಲ, ದಿನವೂ ಅದಕ್ಕಾಗಿ ಸೊಪ್ಪು ತಂದು ಹಾಕುವ ಪ್ರಮೇಯವಿಲ್ಲ, ದಿನನಿತ್ಯದ ಕೊಟ್ಟಿಗೆ ಕೆಲಸವನ್ನು ಮಾಡಿದರಾಯಿತು, ಅಲ್ಲಿನ ನೀರು, ಗೋಮೂತ್ರ, ಎಲ್ಲವೂ ಮೊದಲನೆಯ ಗುಂಡಿಯನ್ನು ಸೇರುತ್ತದೆ. ಅಲ್ಲಿ ಡೈಜೆಸ್ಟ್ ಆದ ಗೊಬ್ಬರ ಫಿಲ್ಟರ್ ಆಗಿ ಎರಡನೆಯ ಗುಂಡಿಯನ್ನು ತುಂಬುತ್ತದೆ. ತುಂಬಿದ ನಂತರ ಎಲೆಕ್ಟ್ರಿಕ್ ಪಂಪ್ ಮೂಲಕ ನೇರವಾಗಿ ಮರಗಳಿಗೆ ಹಾಕಬಹುದು. ಇದನ್ನು ಚಿಕ್ಕ ಮಕ್ಕಳು ಕೂಡ ಮಾಡಬಹುದು. ಗೊಬ್ಬರ ಗುಂಡಿ ಹಾಕಿ ಗೊಬ್ಬರ ಮಾಡುವಾಗ ಮುಖ್ಯವಾಗಿ ನಮಗೆ ಸಮಸ್ಯೆ ಬರುವುದು ಗೊಬ್ಬರ ಹೊರುವ ಕೂಲಿಯಾಳು ಸಮಸ್ಯೆ, ಈ ತರಹದ ಕೌಶಲ್ಯದ ಕೆಲಸಗಳಿಗೆ ಆಳು ಪಗಾರು ಕೂಡ ಹೆಚ್ಚಿರುತ್ತದೆ. ಅಲ್ಲದೆ ಅಡಿಕೆ ತೋಟದ ಯಾವುದೋ ಒಂದು ಪಾಲಿಗೆ ನಾವು ಗೊಬ್ಬರವನ್ನು ಹಾಕುತ್ತವೆ, ಮತ್ತೊಂದು ಪಾಲಿಗೆ ಮುಂದಿನ ವರ್ಷ, ಸರದಿಯಲ್ಲಿ ಬರುವ ಅವಶ್ಯಕತೆ ಈ ಪದ್ಧತಿಯಲ್ಲಿ ಇಲ್ಲ. ಎರಡೂವರೆ ಎಕರೆ ತೋಟಕ್ಕೆ ಪ್ರತಿ 5 ತಿಂಗಳಿಗೊಮ್ಮೆ ಬಯೋಡೈಜೆಸ್ಟರ್ ಹಾಯಿಸಲು ಸಾಧ್ಯ, ಇಳುವರಿಯಲ್ಲಿ ವ್ಯತ್ಯಾಸವಾಗುವುದಿಲ್ಲ, ಬೇರೆ ಯಾವುದಾದರೂ ಗೊಬ್ಬರವನ್ನು ಸೇರಿಸಿ ಗಿಡಗಳಿಗೆ ಉಣಿಸಬಹುದು, ಪೌಷ್ಟಿಕಾಂಶ ದ್ರವರೂಪದಲ್ಲಿ ಸಿಗುವುದರಿಂದ ನೇರವಾಗಿ ಪರಿಣಾಮ ಬೀರುತ್ತದೆ, ಮುಖ್ಯವಾಗಿ ಖರ್ಚಿನಲ್ಲಿ ಉಳಿತಾಯ ಸಾಧ್ಯ ಎನ್ನುತ್ತಾರೆ ಸೀತಾರಾಮ ಕಾನಳ್ಳಿ.

ಈ  ಕೃಷಿಯ ಹಂಸ ವಿಡಿಯೋ ವೀಕ್ಷಿಸಲು ಕೆಳಗಿರುವ ಲಿಂಕ್ ಕಾಪಿ ಮಾಡಿ ಗೂಗಲ್ ಸರ್ಚ್ ಮಾಡಿ

https://youtu.be/DVmN8jcamB0

ಸೀತಾರಾಮ ಕಾನಳ್ಳಿ ಹಂಸ ಜನಪ್ರಿಯ ಅಂಕಣ ಪುರಾಣ ತುಣುಕು ಬರಹಗಾರರು ಆಗಿದ್ದು ಕೇವಲ ಬರಹದಲ್ಲಿ ಅಷ್ಟೇ ಅಲ್ಲ ಕೃಷಿಯಲ್ಲಿಯೂ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ ಎಂಬುದನ್ನು ಅವರ ಈ ಪ್ರಯತ್ನ ಗಮನಕ್ಕೆ ತರುತ್ತದೆ. 

ಪ್ರತಿಕ್ರಿಯೆ

Post a Comment

0 Comments